ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನ ಇಂದು

KannadaprabhaNewsNetwork | Published : May 20, 2025 1:35 AM
ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ಮತ್ತು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಆಶ್ರಯ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನ ಮೇ 20ರಂದು ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ.
Follow Us

ಬೀಳಗಿ: ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ಮತ್ತು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಆಶ್ರಯ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನ ಮೇ 20ರಂದು ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಕಜಾಪ ಜಿಲ್ಲಾ ಕಾರ್ಯದರ್ಶಿ ಆರ್.ಬಿ. ನಬಿವಾಲೆ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಅವರು ಮಾತನಾಡಿ, ಬೆಳಗ್ಗೆ 7.30 ಗಂಟೆಗೆ ಧ್ವಜಾರೋಹಣ ಜರುಗಲಿದ್ದು, ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ರಾಷ್ಟ್ರ ಧ್ವಜಾರೋಹಣ, ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8 ಗಂಟೆಗೆ ಸಮ್ಮೇಳನಾಧ್ಯಕ್ಷರ ಮರವಣಿಗೆಗೆ ಪಿಕೆಪಿಎಸ್‌ ಅಧ್ಯಕ್ಷ ಎಂ.ಬಿ. ಕಂಬಿ ಚಾಲನೆ ನೀಡುವರು. ಸುಮಂಗಲೆಯರ ಆರತಿ, ಕುಂಭ, ಶಿವಭಜನೆ, ಕರಡಿ ಮೇಳ, ಹೆಜ್ಜೆಮೇಳ, ಡೊಳ್ಳು ಕುಣಿತ, ಕಹಳೆ ವಾದನ, ಮತ್ತಿತರ ಕಲಾ ತಂಡಗಳು ಭಾಗವಹಿಸಲಿವೆ.

ಬೆಳಗ್ಗೆ 10.20ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಪೂರ್ಣಾನಂದ ಆಶ್ರಮದ ಅನಸೂಯಾತಾಯಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಆರ್. ಪಾಟೀಲ ಉದ್ಘಾಟಿಸಲಿದ್ದು, ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಅಧ್ಯಕ್ಷತೆ ವಹಿಸುವರು. ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಸರ್ವಾಧ್ಯಕ್ಷತೆ ವಹಿಸುವರು. ಪತ್ರಕರ್ತ ಡಿ.ಎಂ.ಸಾವಕಾರ ಸಂಪಾದಿತ ಜಾನಪದ ಬಂಡಿ ಸ್ಮರಣ ಸಂಚಿಕೆ, ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ ಮತ್ತು ಸಾಹಿತಿ ಶ್ರೀಹರಿ ಧೂಪದ ರಚಿತ ಕಿಷ್ಕಿಂದಾ ಸಂಕುಲಂ ಸಣ್ಣಾಟ ಕೃತಿಯನ್ನು ಹಂಪಿ ವಿಶ್ವವಿದ್ಯಾಲಯದ ಡೀನ್‌ ಡಾ.ಚಲುವರಾಜ ಲೋಕಾರ್ಪಣೆ ಮಾಡುವರು.

ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಪ್ರಾಸ್ತಾವಿಕ ನುಡಿ ಹೇಳುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಲಕ್ಷ್ಮಣ ನಿರಾಣಿ, ಗ್ರಾಪಂ ಅಧ್ಯಕ್ಷೆ ಹುಚ್ಚವ್ವ ಮಾದರ, ಕಜಾಪ ರಾಜ್ಯ ಕಾರ್ಯದರ್ಶಿ ಪ್ರೊ.ಕೆ.ಎಸ್. ಕೌಜಲಗಿ, ಬೆಳಗಾವಿ ವಿಭಾಗೀಯ ಸಂಚಾಲಕ ಡಾ.ಆನಂದಪ್ಪ ಜೋಗಿ, ಎಂ.ಐ. ಮೇಟಿ, ಎಂ.ಜಿ. ಕಂಬಿ, ಎಂ.ಎಸ್. ಅಂಗಡಿ, ಆರ್.ಎಚ್. ಮೇಟಿ, ಡಾ.ರಮೇಶ ಅಕ್ಕಿಮರಡಿ, ಬಿ.ಎಂ. ಸಾಹುಕಾರ, ಆರ್.ಎಂ.ಮುಜಾವರ, ಎ.ವಿ.ನಾಯಕ, ಆರ್.ಸಿ. ಕುಂಚನೂರ ಆಗಮಿಸುವರು.

ಮಧ್ಯಾಹ್ನ 12.10ಕ್ಕೆ ಜರುಗುವ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಗೋಷ್ಠಿಯ ಅಧ್ಯಕ್ಷತೆಯನ್ನು ಕಸಾಪ ರಾಜ್ಯಕಾರ್ಯಕಾರಿಣಿ ಸದಸ್ಯ ಜಿ. ಕೆ.ತಳವಾರ ವಹಿಸುವರು. ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಎಚ್. ತೆಕ್ಕೆನ್ನವರ ಸರ್ವಾಧ್ಯಕ್ಷರ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಸಿಪಿಐ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲ, ವಾಣಿಜ್ಯ ತೆರಿಗೆ ಅಧಿಕಾರಿ ಗಿರೀಶ ಮಂಗಳೂರ, ಸಿಪಿಐ ಎಚ್.ಬಿ. ಸಣಮನಿ ಮತ್ತಿತರರು ಆಗಮಿಸುವರು.

ಜಿಲ್ಲೆಯ ವಿವಿಧ ಪ್ರಕಾರದ ಕಲಾ ತಂಡಗಳ ಕಲಾ ಪ್ರದರ್ಶನ ಬಳಿಕ ಸಂಜೆ 4.30ಕ್ಕೆ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ಜರುಗಲಿದೆ. ಜಿಲ್ಲಾ ಕಾರ್ಯದರ್ಶಿ ಆರ್.ಬಿ. ನಬಿವಾಲೆ ನಿರ್ಣಯ ಮಂಡಿಸಲಿದ್ದು, ಜಿಲ್ಲಾ ಖಜಾಂಚಿ ಸುರೇಶ ವಸ್ತ್ರದ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಉಪಸ್ಥಿತರಿರುವರು.

ಸಂಜೆ 5ಕ್ಕೆ ಜರುಗುವ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ಮರೇಗುದ್ದಿಯ ಗುರುಪಾದ ಮಹಾಸ್ವಾಮೀಜಿ ವಹಿಸುವರು. ಬನಶಂಕರಿದೇವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಬಸವರಾಜ ಖೋತ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಬಸವಪ್ರಭು ಸರನಾಡಗೌಡ, ಎಂ.ಎಲ್. ಕೆಂಪಲಿಂಗಣ್ಣವರ ಸಾಧಕರನ್ನು ಸನ್ಮಾನಿಸುವರು. ವಿಶ್ರಾಂತ ಪ್ರಾಚಾರ್ಯ ಎನ್.ಎಂ. ಕೂಗಲಿ ಅಭಿನಂದನಾ ನುಡಿ ಹೇಳುವರು. ಮುಖ್ಯ ಅತಿಥಿಗಳಾಗಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ಈರಣ್ಣ ಗಾಣಗೇರ ಮತ್ತಿತರ ಗಣ್ಯರು ಆಗಮಿಸುವರು. ಹಿರಿಯ ಪಾರಿಜಾತ ಕಲಾವಿದ ಹೊಳಬಸಯ್ಯ ಕಂಬಿ, ಎಸ್.ವಿ. ಘೋರ್ಪಡೆ, ಎಂ.ಎಚ್. ಗಾಣಗೇರ, ಡಾ.ಪ್ರಕಾಶ ಖಾಡೆ, ಎಸ್.ಎಸ್. ಹಳ್ಳೂರ, ಮಹಾಂತೇಶ ಗಜೇಂದ್ರಗಡ ಸೇರಿದಂತೆ 55ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸಂಜೆ 6ಕ್ಕೆ ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಶಾಸಕ ಜೆ.ಟಿ. ಪಾಟೀಲ ವಹಿಸುವರು. ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಸಮಾರೋಪ ನುಡಿ ಹೇಳುವರು. ಮುಖ್ಯ ಅತಿಥಿಗಳಾಗಿ ಆರ್.ಜಿ. ಪಾಟೀಲ ಮತ್ತಿತರ ಗಣ್ಯರು ಪಾಲ್ಗೊಳ್ಳುವರು. ಇದೇ ವೇಳೆ ಜನಪದ ಕಾವ್ಯ-ಕುಂಚ ಸಿಂಚನದಲ್ಲಿ ಕವಿ ಡಿ. ಎಂ. ಸಾವಕಾರ ಕವಿತೆ ವಾಚಿಸಿದರೆ, ಶಿವಾನಂದ ಬ. ಹಿರೇಮಠ ಕುಂಚನ ಸಿಂಚನ, ಶಿವಾನಂದ ಮಾದರ ಗಾಯನ ಪ್ರಸ್ತುತಪಡಿಸುವರು ಲಿಂ.ವಿ.ಜಿ. ಮಠ ಪ್ರಧಾನ ವೇದಿಕೆಯಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಕಲೆಯನ್ನು ಪ್ರದರ್ಶನ ಮಾಡುವರೆಂದು ತಿಳಿಸಿದರು.