ಬಾಗಲಕೋಟೆ : ಯತೀಂದ್ರ ಅವರು ಆ ರೀತಿ ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಅದು ಸಿಎಲ್‌ಪಿ ಹಾಗೂ ಹೈಕಮಾಂಡ್ ಅಭಿಪ್ರಾಯವಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಸಿಎಂ ಸತೀಶ ಜಾರಕಿಹೊಳಿ ಎಂದು ಸಿಎಂ ಪುತ್ರ ಯತೀಂದ್ರ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಧ್ಯೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸಚಿವರು ಮಾಧ್ಯಮಗಳಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಸಿಎಂ ಆಯ್ಕೆ ಸಿಎಲ್‌ಪಿ ಸಭೆಯಲ್ಲಿ ಹಾಗೂ ಎಐಸಿಸಿ ಮಾಡುತ್ತದೆ. ಹೀಗಾಗಿ ಯತೀಂದ್ರ ಅವರು ಏನು ಹೇಳಿದ್ದಾರೆಯೋ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದನ್ನು ನಾನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು.ನಾಯಕತ್ವ ಎನ್ನುವುದು ನಾಯಕನಲ್ಲಿ ಹೊರ ಹೊಮ್ಮುತ್ತದೆ. ಆ ನಾಯಕತ್ವ ಸತೀಶ ಜಾರಕಿಹೊಳಿ ಅವರಲ್ಲಿದೆ. ಇತ್ತೀಚಿಗೆ ನಾನೇ ಹೇಳಿದ್ದೇನೆ, ಒಂದಲ್ಲ ಒಂದು ದಿನ ಸತೀಶ ಜಾರಕಿಹೊಳಿ ಅವರು ರಾಜ್ಯದ ಸಿಎಂ ಆಗುತ್ತಾರೆಂದು. ಅದು ಇದೇ ಅವಧಿಯಲ್ಲಿ ಅವರು ಸಿಎಂ ಆಗುತ್ತಾರೆ ಎಂದು ನಾನು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
ದಲಿತ ಸಿಎಂ ಆಗಬೇಕು ಎನ್ನುವ ಕೂಗಿನ ಬೆನ್ನಲ್ಲೇ ಇದೀಗ ಸತೀಶ ಹೆಸರು ಮುಂಚೂಣಿಗೆ ಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸತೀಶ ಜಾರಕಿಹೊಳಿ ಅವರು ಸಹ ದಲಿತರು. ನನ್ನನ್ನು ಸೇರಿ ಎಲ್ಲರಿಗೂ ಸಿಎಂ ಆಗುವ ಅವಕಾಶ ಬಂದರೆ ಬೇಡ ಎನ್ನುತ್ತಾರಾ? ಮುಖ್ಯಮಂತ್ರಿ ಆಯ್ಕೆ ಯಾವಾಗಲೂ ಸಿಎಲ್‌ಪಿ ಸಭೆ ಹಾಗೂ ಹೈಕಮಾಂಡ್ ಮಟ್ಟದಲ್ಲಿ ನಿರ್ಧರಿಸಲಾಲಾಗುತ್ತದೆ. ಸತೀಶ ಜಾರಕಿಹೊಳಿ ಸಿಎಂ ಆಗಬೇಕೆನ್ನುವ ವಿಚಾರದಲ್ಲಿ ಯತೀಂದ್ರ ಅವರು ಸರಿಯಾಗಿ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯ ಲೈನ್‌ನಲ್ಲಿ ಇದ್ದಾರೆ. ಎಲ್ಲ ಜಾತಿ ಜನಾಂಗದವರನ್ನು ಜೊತೆಗೂಡಿಸಿಕೊಂಡು ಹೋಗುವ ಶಕ್ತಿ ಅವರಿಗಿದೆ. ಸಿಎಂ ಆಗುವ ಗುಣವೂ ಅವರಲ್ಲಿದೆ ಎಂದು ಸಮರ್ಥಿಸಿಕೊಂಡರು.
ಶೀಘ್ರದಲ್ಲೇ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು: ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಶೀಘ್ರದಲ್ಲೇ ಅಡಿಗಲ್ಲು ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಸಮಯ ಕೇಳಿದ್ದು, ಅವರು ದಿನಾಂಕ ಕೊಡುತ್ತಿದ್ದಂತೆ ಅಡಿಗಲ್ಲು ಹಾಕಲಿದ್ದೇವೆ. ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಸರ್ಕಾರದ ಬೆಲೆ ನಿರ್ಧಾರ ಮಾಡಿದೆ. ಇದೀಗ ಪ್ರತಿವರ್ಷ ₹18 ಸಾವಿರ ಕೋಟಿಗಳಂತೆ ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಟೈಮ್ ಫಿಕ್ಸ್ ಮಾಡಿದ್ದೇವೆ ಎಂದರು.
ನಿಮ್ಮ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳಿಸುವುದಾಗಿ ಘೋಷಿಸಿದ್ದು, ಇದೀಗ ಸರ್ಕಾರದ ಅವಧಿ ಮುಗಿದ ಬಳಿಕ ಎರಡು ವರ್ಷ ಫಿಕ್ಸ್ ಮಾಡಿರುವ ಬಗ್ಗೆ, ಯಾವುದೇ ಸರ್ಕಾರ ಒಂದು ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಮುಂದಿನ ಸರ್ಕಾರವೂ ಅದನ್ನು ಮುಂದುವರಿಸುತ್ತವೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವುದರಿಂದ ಯಾವುದೇ ತೊಂದರೆ ಆಗಲ್ಲ ಎಂದು ಹೇಳಿದರು.
ಈ ಹಿಂದೆ ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸಿ ಗೇಟ್ ಹಾಕಿದ್ದು, ನಮ್ಮ ಸರ್ಕಾರ, ಡ್ಯಾಂನಲ್ಲಿ ನೀರು ನಿಲ್ಲಿಸಿದ್ದು, ಈಗ 3ನೇ ಹಂತಕ್ಕೆ ಮುಳುಗಡೆ ಆಗುವ ಜಮೀನಿಗೆ ಬೆಲೆ ನಿರ್ಧಾರ ಮಾಡಿದ್ದು, ನಮ್ಮದೇ ಸರ್ಕಾರ ಅನುದಾನ ಕೊಡುತ್ತೇವೆ ಎಂದು ಘೋಷಿಸಿ ಪ್ರತಿವರ್ಷ ಎಷ್ಟು ಕೋಟಿ ಎಂದು ಹೇಳಿದ್ದು ಸಹ ನಾವೇ. ಬೇರೆ ಸರ್ಕಾರಗಳು ಕೃಷ್ಣಾ ಯೋಜನೆಗೆ ಏನು ಮಾಡಿದ್ದವು ಎಂದು ಪ್ರಶ್ನಿಸಿದರು.