ಅಪರಾಧ ಲೋಕದಲ್ಲೇ ಬಾಗಪ್ಪ ಬದುಕು ಅಂತ್ಯ!

KannadaprabhaNewsNetwork | Published : Feb 13, 2025 12:50 AM

ಸಾರಾಂಶ

ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎಂದುಕೊಂಡು ಭೀಮಾತೀರದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ ಅದೆಷ್ಟೋ ಪಂಟರು ಇತಿಹಾಸದ ಪುಟ ಸೇರಿದ್ದಾರೆ. ಇದೀಗ ಅದೇ ಸಾಲಿಗೆ ಬಾಗಪ್ಪ ಹರಿಜನ ಕೂಡ ಸೇರಿದ್ದಾನೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಅಪರಾಧಿಕ ಲೋಕದಲ್ಲಿಯೇ ಇದ್ದ ಬಾಗಪ್ಪ ಹರಿಜನ ಅದೇ ಕಾರಣಕ್ಕೆ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆ. ಭೀಮಾತೀರ ಎಂದರೆ ಹಾಗೆ. ಇಲ್ಲಿನ ಹಂತಕರ ಹೆಸರನ್ನು ಕೇಳಿದರೆ ಸಾಕು ಎದೆ ನಡಗುತ್ತೆ. ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎಂದುಕೊಂಡು ಭೀಮಾತೀರದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ ಅದೆಷ್ಟೋ ಪಂಟರು ಇತಿಹಾಸದ ಪುಟ ಸೇರಿದ್ದಾರೆ. ಇದೀಗ ಅದೇ ಸಾಲಿಗೆ ಬಾಗಪ್ಪ ಹರಿಜನ ಕೂಡ ಸೇರಿದ್ದಾನೆ.

ಒಂದು ಕಾಲದಲ್ಲಿ ಚಂದಪ್ಪ ಹರಿಜನ ಜೊತೆಗೆ ಸೇರಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪನ ಮೇಲೆ 2017 ಆಗಸ್ಟ್ 8ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದಾಳಿಯಾಗಿತ್ತು. ಅಲ್ಲಿಂದಲೇ ಬದಲಾದ ಬಾಗಪ್ಪ ಗೂಂಡಾಗಿರಿ, ರೌಡಿಸಂ ಬಿಡಲು ಯತ್ನಿಸಿದ್ದ. ಆದರೆ ಕೊನೆಗೆ ಅದೆಲ್ಲವನ್ನೂ ಬಿಡಲಾಗದೆ ತನ್ನ ಪ್ರಾಣವನ್ನೇ ಬಿಡಬೇಕಾಯಿತು ಎಂಬ ಮಾತು ಈಗ ಕೇಳಿಬರುತ್ತಿದೆ.

ತಾನು ಸಾಕ್ಷಿ ಹೇಳಲು ಬಂದು ಕೊಲೆಯಾದ:

ಈ ಹಿಂದೆ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಹೊರಟಿದ್ದವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದ ಬಾಗಪ್ಪ. ಆದರೆ ಇದೀಗ ತನ್ನ ಮೇಲೆ ನಡೆದಿದ್ದ ಗುಂಡಿನ ದಾಳಿಯ ಕುರಿತು ಫೆ.19ರಂದು ಸಾಕ್ಷಿ ಹೇಳಲೆಂದು ಬಂದಿದ್ದು, ಕೊಲೆಯಾಗಿದ್ದಾನೆ.

ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬಂದೂಕು, ಗನ್‌ಗಳೆಂದರೆ ಬಹಳ ಇಷ್ಟಪಡುತ್ತಿದ್ದ. ಹೀಗಾಗಿಯೇ ಈತ ಶಾರ್ಪ್ ಶೂಟರ್ ಎನಿಸಿಕೊಂಡಿದ್ದ. ಬಾಗಪ್ಪ ಗುರಿ ಇಟ್ಟರೆ ಎದುರಾಳಿ ಎದೆಯನ್ನೇ ಸೀಳುತ್ತಿದ್ದ. ಆದರೆ ಬಾಗಪ್ಪ ತಾನು ಇಷ್ಟಪಡುತ್ತಿದ್ದ ಬಂದೂಕಿನಿಂದಲೇ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಎಚ್ಚರಿಕೆ ನೀಡಿದ್ದವನನ್ನೇ ಎತ್ತಿದರು:

ಕೆಲ ತಿಂಗಳ ಹಿಂದೆ ಬಾಗಪ್ಪ ವಿಡಿಯೋ ಒಂದರಲ್ಲಿ ಮಾತನಾಡಿ, ನನ್ನಷ್ಟಕ್ಕೆ ನಾನು ಇದ್ದೇನೆ. ನಾನು ಯಾರ ತಂಟೆಗೂ ಹೋಗುತ್ತಿಲ್ಲ. ನನ್ನ ಪಾಡಿಗೆ ನಾನಿದ್ದೇನೆ. ಆದರೆ ನನಗೆ ವಿರುದ್ಧವಾದರೆ ನಾನು ಅವರ ಮನೆ ಹೊಕ್ಕು ತಲೆಗೆ ಬಂದೂಕು ಇಟ್ಟು ಹೊಡೆಯುತ್ತೇನೆ. ನಾನು ಕಮಜೋರ್ (ವೀಕ್) ಇಲ್ಲ. ನನಗೆ (ಪೊಲೀಸ್‌) ಡಿಪಾರ್ಟ್‌ಮೆಂಟ್‌ ಮೇಲೆ ಗೌರವವಿದೆ. ಸಮಾಜದಲ್ಲಿ ಶಾಂತಿಯಿಂದ ಇರಬೇಕು. ಆದ್ದರಿಂದ ನಾನು ಸಮಾಜಮುಖಿಯಾಗುತ್ತಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬಾರದು ಎಂದು ತನ್ನ ವಿರೋಧಿಗಳಿಗೆ ಬಾಗಪ್ಪ ಖಡಕ್ ಎಚ್ಚರಿಕೆ ನೀಡಿದ್ದ. ಮತ್ತೆ ಮೈಕೊಡವಿಕೊಂಡ ಬಾಗಪ್ಪನಿಂದ ತಮಗೆ ಅಪಾಯವಿದೆ ಎಂದು ಅರಿತ ಎದುರಾಳಿಗಳು ಈ ಹತ್ಯೆ ನಡೆಸಿರಬಹುದು ಎಂದೂ ಶಂಕಿಸಲಾಗುತ್ತಿದೆ.

ಕೋರ್ಟ್ ಆವರಣದಲ್ಲಿ ಬಚಾವ್, ಮನೆ ಮುಂದೆ ಖತಂ:

2017 ಆಗಸ್ಟ್ 8ರಂದು ಕೋರ್ಟ್ ಆವರಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂರು ಗುಂಡು ದೇಹ ಸೇರಿದ್ದರೂ ಹೈದ್ರಾಬಾದ್‌ನಲ್ಲಿ ಸಿಕ್ಕ ಸೂಕ್ತ ಚಿಕಿತ್ಸೆ ಬಳಿಕ ಬದುಕುಳಿದಿದ್ದ. ಆದರೆ 2025 ಫೆ.11ರಂದು ಮನೆಮುಂದೆ ದುಷ್ಕರ್ಮಿಗಳು ಎರಡು ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಸುಮಾರು ಆರು ಕೊಲೆ ಕೇಸ್‌ಗಳು, ನಾಲ್ಕು ಇತರೆ ಕೇಸ್‌ಗಳು ಸೇರಿದಂತೆ ಬಾಗಪ್ಪನ ಮೇಲೆ ಹತ್ತು ಪ್ರಕರಣಗಳಿವೆ. ಈ ಕೊಲೆ ಹಳೆ ವೈಷಮ್ಯದ ಹಿನ್ನೆಲೆ ಆಗಿದೆಯಾ? ಹಣಕಾಸಿನ ವ್ಯವಹಾರದ ಹಿನ್ನೆಲೆ ಆಗಿದೆಯಾ?, ಅಥವಾ ಬೇರೆ ಕಾರಣವೇ ಇದೆಯಾ ಎಂಬುದರ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಹಂತಕ ಬಾಗಪ್ಪ ಹತ್ಯೆ ಪ್ರಕರಣದ ಹಿಂದೆ ಕೊಲೆಯಾದ ರವಿ ಅಗರಖೇಡನ ಸಹೋದರ ಪಿಂಟ್ಯಾ ವಿರುದ್ಧ ಅನುಮಾನ ವ್ಯಕ್ತವಾಗಿದೆ. ಕಳೆದ ಕೆಳ ತಿಂಗಳ ಹಿಂದೆ ನಗರದಲ್ಲಿ ವಕೀಲ ರವಿ ಅಗರಖೇಡ ಎಂಬಾತನ ಹತ್ಯೆಯಾಗಿತ್ತು. ಅದರಲ್ಲಿ ಬಾಗಪ್ಪನ ಕೈವಾಡ ಇದೆ ಎನ್ನಲಾಗಿದ್ದು, ಇದೀಗ ರವಿಯ ಸಹೋದರ ಪಿಂಟ್ಯಾ ಹಾಗೂ ಸಹಚರರು ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಭೀಮಶ್ಯಾ ಹರಿಜನನ ಸಂಚು?:

ಚಂದಪ್ಪ ಹರಿಜನನ ಸಂಬಂಧಿಯಾಗಿದ್ದ ಬಾಗಪ್ಪ ಮೊದಲಿನಿಂದಲೂ ಆತನ ಜೊತೆಯಲ್ಲೇ ಇದ್ದ. ಚಂದಪ್ಪನ ಎನ್‌ಕೌಂಟರ್‌ ಬಳಿಕ ಆಸ್ತಿ ಹಾಗೂ ಹಣಕಾಸಿನ ವಿಚಾರವಾಗಿ ಚಂದಪ್ಪನ ಕುಟುಂಬಕ್ಕೂ ಹಾಗೂ ಬಾಗಪ್ಪನಿಗೂ ವೈಷಮ್ಯ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆ ಬೊಮ್ಮನಹಳ್ಳಿಯಲ್ಲಿ ಚಂದಪ್ಪನ ಸಹೋದರ ಬಸವರಾಜನ ಕೊಲೆ ನಡೆದಿದ್ದು, ಅದರ ಪ್ರಮುಖ ಆರೋಪಿ ಬಾಗಪ್ಪನೇ ಆಗಿದ್ದ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೋರ್ಟ್ ಆವರಣದಲ್ಲಿ ಚಂದಪ್ಪನ ಅಣ್ಣ ಯಲ್ಲಪ್ಪನ ಮಗ ಭೀಮಶ್ಯಾ ಹಾಗೂ ಸಹಚರರು ಗುಂಡು ಹಾರಿಸಿ ಬಾಗಪ್ಪನ ಕೊಲೆಗೆ ಯತ್ನಿಸಿದ್ದು. ಅದೃಷ್ಟವಶಾತ್ ಬಾಗಪ್ಪ ಬದುಕಿದ್ದರಿಂದ ಅದೇ ವೈಷಮ್ಯ ಮುಂದುವರೆಸಿ ಇದೇ ತಂಡ ಪ್ಲಾನ್ ಮಾಡಿ ಮತ್ತೆ ಕೊಲೆ ಮಾಡಿರಬಹುದು ಎಂದೂ ಹೇಳಲಾಗುತ್ತಿದೆ.

ಹೊಸ ಹುಡುಗರ ತಂಡದಿಂದ ಕೃತ್ಯ?:

ಈ ಎರಡೂ ಆಯಾಮಗಳಲ್ಲದೇ ಬಾಗಪ್ಪನ ಹಣಕಾಸಿನ ವ್ಯವಹಾರದಲ್ಲಿ ಕೆಲವರೊಂದಿಗೆ ವೈಮನಸ್ಸು ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಬೇರೆ ಯಾರೋ ಹೊಸಬರನ್ನೇ ಕರೆಯಿಸಿ ಈ ಕೊಲೆ ಮಾಡಿಸಿದ್ದಾರೆಯೇ ಎಂಬುದರ ಕುರಿತಾಗಿಯೂ ತನಿಖೆ ನಡೆದಿದೆ.

Share this article