ಕನ್ನಡಪ್ರಭ ವಾರ್ತೆ ವಿಜಯಪುರ
ಫೆ.11ರಂದು ರಾತ್ರಿ 9.20ರ ವೇಳೆಗೆ ಮದೀನಾ ನಗರದ ಬಳಿ ಭೀಕರ ಕೊಲೆಯಾಗಿದ್ದ ಭೀಮಾತೀರದ ಹಂತಕ, ರೌಡಿಶೀಟರ್ ಬಾಗಪ್ಪ ಹರಿಜನನ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದಲ್ಲಿ ನಡೆಸಲಾಯಿತು. ಈ ವೇಳೆ ಬಾಗಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಫೆ.11ರಂದು ರಾತ್ರಿ 9.20ರ ವೇಳೆಗೆ ಮದೀನಾ ನಗರದ ಬಳಿ ಆಟೋದಲ್ಲಿ ಬಂದು ಬಾಗಪ್ಪನ ಮೇಲೆ ಎರಗಿದ ನಾಲ್ಕೈದು ಜನ ಅಪರಿಚಿತರು ಆತನ ಮೇಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಸೇರಿದಂತೆ ಇಡಿ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಬೆರಳಚ್ಚು ತಜ್ಞರು, ಶ್ವಾನದಳ ಸೇರಿದಂತೆ ಎಲ್ಲಾ ತನಿಖಾ ತಂಡಗಳು ಆಗಮಿಸಿ ತನಿಖೆ ಆರಂಭಿಸಿದ್ದು, ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ. ಬಾಗಪ್ಪ ಹರಿಜನನ ಹತ್ಯೆ ಕುರಿತು ಗಾಂಧಿಚೌಕ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣ್ಣಲ್ಲಿ ಮಣ್ಣಾದ ಬಾಗಪ್ಪ:ಕೊಲೆ ನಡೆದ ಬಳಿಕ ರಾತ್ರಿಯೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾದ ಬಾಗಪ್ಪನ ಮೃತದೇಹದ ಶವಪರೀಕ್ಷೆ ಫೆ.12ರಂದು ಮಧ್ಯಾಹ್ನ ಮುಗಿಯಿತು. ಬಳಿಕ ಮೃತದೇಹವನ್ನು ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮಕ್ಕೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಬಾಗಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪೂರ್ವನಿಯೋಜಿತ ಕೊಲೆ?:2017 ಆ.8ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್‌ನಲ್ಲಿ ಸಾಕ್ಷಿ ನುಡಿಯಲು ಬಂದಿದ್ದ ಬಾಗಪ್ಪ ಹರಿಜನ ಯಾರಿಗೂ ಗೊತ್ತಾಗಬಾರದು ಎಂದು ಹೊರವಲಯದ ರೇಡಿಯೋ ಕೇಂದ್ರದ ಬಳಿ ಬಾಡಿಗೆ ಮನೆಯಲ್ಲಿ ಗಪಚುಪ್ ಇದ್ದ. ಫೆ.19ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಲು ಬಾಗಪ್ಪ ಬಂದಿದ್ದಾನೆ ಎಂಬ ಮಾಹಿತಿ ಪಡೆದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯದಂತೆ ಕಾಣುತ್ತಿದೆ ಎಂದು ಪೊಲೀಸರು ಕೂಡ ಶಂಕಿಸಿದ್ದಾರೆ.
ನಮ್ಮ ತಂದೆ ಹತ್ಯೆಯಾದ ಕುರಿತು ಪಿಂಟ್ಯೂ ಪ್ರಕಾಶ ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಕ್ತು ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಹೀಗಾಗಿ ಈ ಹತ್ಯೆಯನ್ನು ಪಿಂಟ್ಯೂ ಸೇರಿ ಇತರರು ಮಾಡಿದ್ದಾರೆ. ಪಿಂಟ್ಯೂನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ನಮ್ಮ ತಂದೆ ಹತ್ಯೆಗೆ ನ್ಯಾಯ ಸಿಗಬೇಕು. ನಮ್ಮ ತಂದೆ ಇದ್ದ ಬಾಡಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂಜನಾಳ ಬಗ್ಗೆಯೂ ನಮಗೆ ಅನುಮಾನ ಇದೆ. ಯಲ್ಲಪ್ಪನ ಹರಿಜನ ಮಗ ಭೀಮಶಿ ಹರಿಜನ ಇವರೆಲ್ಲರೂ ಸೇರಿ ಹತ್ಯೆ ಮಾಡಿರಬಹುದು.ಗಂಗೂಬಾಯಿ, ಕೊಲೆಯಾದ ಬಾಗಪ್ಪನ ಪುತ್ರಿ
ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ ಬಾಗಪ್ಪ ಹರಿಜನ ಮನೆಮುಂದೆ ವಾಕಿಂಗ್ ಮಾಡುವ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನರಿಂದ ಈ ಹತ್ಯೆ ನಡೆದಿದೆ. ಕೊಡಲಿ ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ, ಕಂಟ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಾಗಪ್ಪ ಹರಿಜನನ ಮೇಲೆ 10 ಕೇಸ್‌ಗಳಿವೆ. ಈ ಪೈಕಿ 6 ಮರ್ಡರ್ ಕೇಸ್ ಇವೆ. 1993 ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿದೆ. 2016-17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್ ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ತಂಡವಾಗಿ ಕೆಲಸ ಮಾಡುತ್ತಿದ್ದು, ಎಲ್ಲ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ