ಬಗರ್ ಹುಕುಂ ಸಾಗುವಳಿದಾರರು ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ: ಶಾಸಕ ಬಿಜಿ ಗೋವಿಂದಪ್ಪ

KannadaprabhaNewsNetwork | Published : Dec 27, 2023 1:30 AM

ಸಾರಾಂಶ

ಹೊಸದುರ್ಗ ತಾಲೂಕಿನ ಮತ್ತೋಡು ಹೋಬಳಿ ಗುಡ್ಡದ ನೇರಲಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಗರ್ ಹುಕುಂ ಸಾಗುವಳಿದಾರರು ಸಾಗುವಳಿ ಚೀಟಿಗಾಗಿ ಯಾರಿಗೂ ಹಣ ನೀಡಿ ಮೋಸ ಹೋಗಬೇಡಿ. ತಾಲೂಕು ಕಚೇರಿ ಮುಖಾಂತರವೇ ಹಕ್ಕುಪತ್ರ ನೀಡಲಿದ್ದೇವೆ ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.

ತಾಲೂಕಿನ ಮತ್ತೋಡು ಹೋಬಳಿ ಗುಡ್ಡದ ನೇರಲಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವೊದೋ ಸಂಘ ಸಂಸ್ಥೆಯವರು ಲಕ್ಕಿಹಳ್ಳಿ ಭಾಗದಲ್ಲಿ ಸಾಗುವಳಿ ಹಕ್ಕುಪತ್ರ ನೀಡುವುದಾಗಿ ಸಾಗುವಳಿ ದಾರರಿಂದ ದಾಖಲೆ ಹಾಗೂ ಹಣ ವಸೂಲಿ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಮಧ್ಯವರ್ತಿಗಳ ಹಿಂದೆ ಹೋಗಿ ಮೋಸ ಹೋಗಬೇಡಿ ಎಂದರು.

ಫಾರ್ಂ 54 ಹಾಗೂ 57 ರಅಡಿ ಸಾಗುವಳಿ ಜಮೀನು ಮಂಜೂರಾತಿಗೆ ಸಲ್ಲಿಸಿದ ಅರ್ಜಿಗಳ ಆಧಾರದಲ್ಲಿ ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಜಮೀನಗಳ ಜಿಪಿಎಸ್ ಸರ್ವೇ ಮಾಡಿ ಸಾಗುವಳಿದಾರರ ವಿವರ ನಮೂದಿಸುವರು. ಪ್ರತಿ ಸೋಮವಾರ ಬಗರ್ ಹುಕುಂ ಸಮಿತಿ ಸಭೆ ಸೇರುತ್ತೇವೆ. ಕಳೆದ 15 ದಿನದಲ್ಲಿ ಆಗಿರುವ ಪ್ರಗತಿ ವರದಿ ಪಡೆದು ಮುಂದಿನ ಕ್ರಮಕ್ಕೆ ಆದೇಶಿಸುತ್ತೇನೆ. ಸಾಗುವಳಿದಾರರು ಕಡ್ಡಾಯವಾಗಿ ಉಪ ನೋಂದಣಿ ಕಚೇರಿಯಲ್ಲಿ ಅಸ್ತಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ವಿವಿಧ ನಿಗಮಗಳಲ್ಲಿನ ಸೌಲಭ್ಯಗಳಿಗೆ ಬಹಳಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಗುರಿ ಕಡಿಮೆಯಿದೆ, ಹಾಗಾಗಿ ಗುರಿ ಹೆಚ್ಚಳ ಮಾಡುವಂತೆ ಸಿಎಂರಲ್ಲಿ ಮನವಿ ಮಾಡಿದ್ದೇವೆ. ಬರುವ ಮೇ ತಿಂಗಳಿನಲ್ಲಿ ಹೊಸ ಮನೆಗಳಿಗೆ ಅರ್ಜಿ ಕರೆದು, ಗ್ರಾಮ ಸಭೆ ಮುಂದಿರಿಸಿ ಫಲಾನುಭವಿ ಆಯ್ಕೆ ಮಾಡಲಾಗುವುದು. ಸದ್ಯ ಈ ಹಿಂದೆ ಮಂಜೂರು ಆಗಿರುವ ಮನೆಗಳಿಗೆ ಸರ್ಕಾರ ಅನುದಾನ ನೀಡಿದ್ದು, ಫಲಾನುಭವಿಗಳು ಶೀಘ್ರವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.

ತಾಲೂಕಿನಲ್ಲಿ ಜೆಜೆಎಂ ಕೆಲಸ ಆಗುತ್ತಿದೆ. ಪೈಪ್‌ಲೈನ್ ಅಳವಡಿಸುವಾಗ ರಸ್ತೆ ಅಗೆಯಲಾಗಿದೆ. ರಸ್ತೆ ಹಿಂದಿನಂತೆ ಸರಿ ಮಾಡಬೇಕು. ನಲ್ಲಿಗಳ ಮೂಲಕ ಮನೆ ಬಾಗಿಲಿಗೆ ನೀರು ಬರಬೇಕು, ಅಲ್ಲಿಯವರೆಗೂ ಬಿಲ್ ತಡೆ ಹಿಡಿಯುವಂತೆ ಎಇಇಗೆ ಸೂಚಿಸಿದರು. ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಮಸ್ಯೆ ಅಳಿಸಲಿಕ್ಕೆ ಪರಿಹಾರ ನೀಡಲಿಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಲೂಕು ಕಚೇರಿ ಸುತ್ತುವ ಬದಲು ನಾವಾಗಿಯೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಬಗರ್ ಹುಕುಂ ಸಾಗುವಳಿ ಅರ್ಜಿ ವಿಲೇವಾರಿ ಮಾಡಲು ಈಗಾಗಲೇ ಪೂರ್ವಭಾವಿಯಾಗಿ ಸಭೆ ಮಾಡಿದ್ದು, ಸಾಗುವಳಿ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ಬರ ಪರಿಹಾರ ಹಣಕ್ಕಾಗಿ ರೈತರು ಕಡ್ಡಾಯವಾಗಿ ಎಪ್‌ಐಡಿ ಕಾರ್ಡ್ ಹೊಂದಿರಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ಮಾತನಾಡಿ, ಬರಗಾಲ ಪೀಡಿತ ತಾಲೂಕುಗಳಿಗೆ ಸರಕಾರ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿದೆ. ಅರ್ಜಿ ಸಲ್ಲಿಸಲು ಡಿ.31ರಂದು ಕೊನೆಯ ದಿನ ಎಂದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಕಿರಣ್ ಮಾತನಾಡಿ, ಕಾಮಧೇನು ಯೋಜನೆಯಡಿ ವಿಮೆ ಇಲ್ಲದ ಹಸು, ಎಮ್ಮೆ, ಎತ್ತು ಮೃತ ಪಟ್ಟರೆ 10ಸಾವಿರ ರುವರೆಗೂ ಸಹಾಯಧನ ಇರಲಿದೆ. ಪಶು ವೈದ್ಯರನ್ನು ಸಂಪರ್ಕಿಸಿ ಜಿಪಿಎಸ್ ಆಧಾರಿತ ಫೋಟೋ ಅಗತ್ಯವಾಗಿ ಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this article