ಮೇ 23ರಂದು ಬಗರ್‌ ಹುಕುಂ ಸಂತ್ರಸ್ತರ ಸಮಾವೇಶ: ವೈ.ಎಸ್.ವಿ.ದತ್ತ

KannadaprabhaNewsNetwork |  
Published : May 11, 2026, 01:30 AM IST
10ಕೆಕೆಡಿಯು2. | Kannada Prabha

ಸಾರಾಂಶ

ಜಿಲ್ಲೆಯ ಮೂಡಿಗೆರೆಯಲ್ಲಿ ಬಗರ್ ಹುಕುಂ ಮಂಜೂರಾತಿ ರದ್ದುಪಡಿಸಿರುವ ಸರ್ಕಾರದ ರೈತ ವಿರೋಧಿ ನಡೆಯ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸಿದ್ದವಾಗುವ ನಿಟ್ಟಿನಲ್ಲಿ ಮೇ 23 ರಂದು ನಮ್ಮ ಭೂಮಿ-ನಮ್ಮ ಹಕ್ಕು ಬಗರ್ ಹುಕುಂ ಸಂತ್ರಸ್ತರ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಜಿಲ್ಲೆಯ ಮೂಡಿಗೆರೆಯಲ್ಲಿ ಬಗರ್ ಹುಕುಂ ಮಂಜೂರಾತಿ ರದ್ದುಪಡಿಸಿರುವ ಸರ್ಕಾರದ ರೈತ ವಿರೋಧಿ ನಡೆಯ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸಿದ್ದವಾಗುವ ನಿಟ್ಟಿನಲ್ಲಿ ಮೇ 23 ರಂದು ನಮ್ಮ ಭೂಮಿ-ನಮ್ಮ ಹಕ್ಕು ಬಗರ್ ಹುಕುಂ ಸಂತ್ರಸ್ತರ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕಡೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಡಾ.ವೈ.ಸಿ. ವಿಶ್ವನಾಥ್, ಬೆಳ್ಳಿಪ್ರಕಾಶ್ ಹಾಗೂ ನನ್ನ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ನಿಯಮಾವಳಿ ಪ್ರಕಾರವೇ ಮಂಜೂರಾತಿಯ ಸಾಗುವಳಿ ಪತ್ರ ನೀಡಲಾಗಿದೆ. ಅನೇಕ ರೈತರು ಸಾಲ ಸೂಲ ಮಾಡಿ ಕಿಮ್ಮತ್ತು ಕಟ್ಟಿ ಜಮೀನು ಪಡೆದಿದ್ದಾರೆ. ಈ ರೀತಿ 2010 ರಿಂದ 2023 ರವರೆಗೆ ನೀಡಲಾದ ಬಗರ್ ಹುಕುಂ ಮಂಜೂರಾತಿಯಲ್ಲಿ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದರು.

ಕೆಲವೆಡೆ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆ. ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೂಲಕ ತನಿಖೆ ನಡೆಸಿ ಮಂಜೂರಾತಿ ಪಡೆದವರಿಗೆ ನೋಟಿಸ್ ನೀಡಿ ಸರ್ಕಾರ ರದ್ದುಪಡಿಸಿ ಪಹಣಿ ವಜಾ ಮಾಡುತ್ತಿದೆ. ಇದು ಸ್ಪಷ್ಟವಾಗಿ ಸರ್ಕಾರದ ರೈತ ವಿರೋಧಿ ನಡೆ. ಇದನ್ನು ಪ್ರಶ್ನಿಸಿ ಮೂಡಿಗೆರೆಯ ಕೆಲ ರೈತರು ಹೈಕೋರ್ಟ್‌ಗೆ ಹೋಗಿದ್ದು, ಹೈಕೋರ್ಟ್ ರೈತರ ಅರ್ಜಿ ಪರಿಗಣಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದು ರೈತರಲ್ಲಿ ಸಣ್ಣ ಆಶಾಕಿರಣ ಮೂಡಿಸಿದೆ. ಇದೇ ರೀತಿ ಕಡೂರಿನ ಸಂತ್ರಸ್ತ ರೈತರೂ ತಡೆಯಾಜ್ಞೆ ತರಬೇಕಿದೆ. ಮೂಡಿಗೆರೆಯಲ್ಲಿ 3 ಸಾವಿರ, ಕಡೂರಿನಲ್ಲಿ 4 ಸಾವಿರ ಸಂತ್ರಸ್ತರಿದ್ದಾರೆ. ಇವರೆಲ್ಲರೂ ಸೇರಿ ವಕಾಲತ್ತು ಹಾಕಿಸಿ ನ್ಯಾಯಾಲಯದ ತಡೆಯಾಜ್ಞೆ ಎಲ್ಲರಿಗೂ ಅನ್ವಯವಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಕಾರ್ಯವಾಗಬೇಕು. ಸರ್ಕಾರ ರೈತರ ಮನವಿ ಪರಿಗಣಿಸಿ ಆದೇಶವನ್ನು ಹಿಂಪಡೆಯಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸರ್ಕಾರಿ ಅಧಿಕಾರಿಗಳ ಮಾತನ್ನು ನಂಬಿ ರೈತರಿಗೆ ಅನ್ಯಾಯ ಮಾಡಿದರೆ ನ್ಯಾಯಾಂಗ ಹೋರಾಟ ಅನಿವಾರ್ಯವಾಗಲಿದೆ. ಈ ನಿಟ್ಟಿನಲ್ಲಿ ಮೇ .23 ರಂದು ಮೂಡಿಗೆರೆಯಲ್ಲಿ ಸಂತೃಸ್ತ ರೈತರ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶಕ್ಕೆ ಖ್ಯಾತ ವಕೀಲ ಶಿವಪ್ರಸಾದ್ ಹಾಗೂ ಪ್ರಸಾದ್ ಮತ್ತಿತರ ವಕೀಲರ ತಂಡ ಬರಲಿದೆ ಎಂದರು.

ಮಂಜೂರಾತಿಯಾಗಿದ್ದರೂ ತೊಂದರೆಗೆ ಒಳಗಾಗಿರುವ ಪ್ರತಿ ರೈತರ ಬಳಿ ಹೈಕೋರ್ಟ್‌ಗೆ ವಕಾಲತ್ತು ಹಾಕಿಸುವ ಕಾರ್ಯ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಸಂತ್ರಸ್ತ ರೈತರು ತಮ್ಮ ದಾಖಲೆಗಳನ್ನು ತರಬೇಕು. ಅಂದು ಬೆಳಿಗ್ಗೆ 8 ಗಂಟೆಗೆ ಕಡೂರು ಪ್ರವಾಸಿ ಮಂದಿರದಿಂದ ಕಡೂರು ಭಾಗದ ರೈತರ ಸಾಂಕೇತಿಕ ಜಾಥಾ ನಡೆಸಿ ಮೂಡಿಗೆರೆಗೆ ತೆರಳಲಾಗುವುದು. ಅಲ್ಲಿನ ರೈತ ಭವನದಲ್ಲಿ ನಡೆಯುವ ಸಮಾವೇಶ ರಾಜಕೀಯೇತರ ಸಮಾವೇಶ.ಬಗರ್ ಹುಕುಂ ಸಂತ್ರಸ್ತ ರೈತರ ಪರವಾಗಿ ಸರ್ಕಾರದ ಗಮನ ಸೆಳೆಯುವ ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡುವುದಷ್ಟೆ ಈ ಸಮಾವೇಶದ ಉದ್ದೇಶವಾಗಿದೆ ಎಂದರು.

ಈ ಹೋರಾಟದ ಖರ್ಚಿಗಾಗಿ ರೈತರು ಯಾರೂ ಹಣ ನೀಡಬೇಕಿಲ್ಲ. ಈ ನ್ಯಾಯಾಂಗ ಹೋರಾಟದ ವೆಚ್ಚವನ್ನು ಸಮಾನ ಮನಸ್ಕರೆಲ್ಲರೂ ಸೇರಿ ಭರಿಸುವ ಚಿಂತನೆ ಮಾಡಿದ್ದೇವೆ. ಸಂತ್ರಸ್ತ ರೈತರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ತಾಲೂಕಿನ ಬಗರ್ ಹುಕುಂ ರೈತರ ಸಮಸ್ಯೆ ಒಂದು ಭಾಗವಾದರೆ ಎಮ್ಮೆದೊಡ್ಡಿ ಸರ್ವೆ ನಂಬರ್ 70 ರ ಸಮಸ್ಯೆ ಒಂದು ಭಾಗ. ಎಮ್ಮೆದೊಡ್ಡಿ ಪ್ರದೇಶ ಪರಿಭಾವಿತ ಅರಣ್ಯ ಪ್ರದೇಶ ಎಂದು ನಮೂದಾಗಿದೆ. ಆದರೆ ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಹತ್ತಾರು ದಶಕಗಳಿಂದ ಅಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಅದು ಅರಣ್ಯ ಪ್ರದೇಶ ಎಂಬುದಕ್ಕೆ ದಾಖಲೆಯನ್ನು ನ್ಯಾಯಾಲಯ ಕೇಳಿದೆ. ಇಲ್ಲಿಯ ತನಕ ದಾಖಲೆಗಳನ್ನು ಅರಣ್ಯ ಇಲಾಖೆಯಾಗಲೀ, ಕಂದಾಯ ಇಲಾಖೆಯಾಗಲೀ ನೀಡಿಲ್ಲ. ಅರಣ್ಯ ಎಂದು ಪರಿಗಣಿಸಲು ಇರುವ ಯಾವುದೇ ನಿಯಮ ಕಂಡು ಬರದಿದ್ದರೂ ಕೇವಲ ಕುರುಚಲು ಗಿಡಗಳನ್ನು ಪರಿಗಣಿಸಿ ಪರಿಭಾವಿತ ಅರಣ್ಯ ಎಂದು ನಮೂದಿಸಲಾಗಿದೆ. ಯಾರೋ ಮಾಡಿದ ತಪ್ಪಿಗೆ ಬಡ ರೈತರು ಬಲಿಪಶುಗಳಾಗಬಾರದು ಎಂದರು.

ಬಗರ್ ಹುಕುಂ ಸಮಿತಿಗೆ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿದ್ದು,. ಸಮಿತಿ ಸದಸ್ಯರನ್ನು ಸಹ ಸರ್ಕಾರವೇ ನೇಮಿಸುತ್ತದೆ. ತಹಶೀಲ್ದಾರ್ ಕಾರ್ಯದರ್ಶಿಯಾಗಿದ್ದು,. ಹಾಗಾಗಿ ಶಾಸಕರೊಬ್ಬರೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಯಾರೋ ಅಧಿಕಾರಿಗಳಿಂದ ಅಕ್ರಮ ಭೂ ಮಂಜೂರಾತಿಯಾಗಿದ್ದರೆ ಅದನ್ನು ರದ್ದುಪಡಿಸಲಿ. ಅದನ್ನು ಬಿಟ್ಟು ಇಡೀ ಮಂಜೂರಾತಿಯನ್ನೇ ರದ್ದುಪಡಿಸುವುದು ಅವೈಜ್ಞಾನಿಕ ಹಾಗೂ ನೈಜ ಫಲಾನುಭವಿಗಳಿಗೆ ಸರ್ಕಾರ ಮಾಡಿದ ಅನ್ಯಾಯವಾಗಲಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡರಾದ ಸಿ.ಎಚ್. ಪ್ರೇಂಕುಮಾರ್, ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ.ಗಂಗಾಧರ ನಾಯ್ಕ, ಯರದಕೆರೆ ರಾಜಪ್ಪ, ಚಿಕ್ಕಮಗಳೂರು, ಕಡೂರು ರೈತ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಡಾ.ಪ್ರಭಾಕರ ರಾವ್
ಶರಣರಿಂದ ಜೀವನದ ಮೌಲ್ಯವರ್ಧನೆಗೆ ಶ್ರಮ