ಕನ್ನಡಪ್ರಭ ವಾರ್ತೆ ಮೈಸೂರುಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಸಿರುವ ಭಾರತೀಯ ಸಂವಿಧಾನ ನಮ್ಮೆಲ್ಲರಿಗೂ ಮಾರ್ಗದರ್ಶವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದರು. ರಂಗಾಯಣದಲ್ಲಿ ಬಹುರೂಪಿ ಬಾಬಾ ಸಾಹೇಬ್ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಸಂವಿಧಾನವನ್ನು ರಚನೆ ಮಾಡಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಂವಿಧಾನ ಕಾರಣ. ನಾನು ಇಂದು ನಿಂತು ಭಾಷಣ ಮಾಡಲು ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಂದರು. ರಂಗಾಯಣಕ್ಕೆ ಉತ್ತಮ ಇತಿಹಾಸ ಇದೆ. ಇಲ್ಲಿ 24 ನಾಟಕಗಳು ನಡೆಯುತ್ತಿವೆ. ರಂಗಾಯಣವನ್ನು ಧಾರವಾಡ ಕಲಬುರ್ಗಿ ಹೀಗೆ ಪ್ರಾದೇಶಿಕವಾಗಿ ಸ್ಥಾಪನೆ ಮಾಡಿ ಉತ್ತೇಜನ ನೀಡಲಾಗುತ್ತಿದೆ. ರಂಗಾಯಣದಲ್ಲಿ ದೊಡ್ಡ ಪ್ರತಿಭೆಗಳು ಬೆಳೆದು ನಾಡಿಗೆ ಕಲೆಯನ್ನು ನೀಡುತ್ತಿವೆ ಎಂದು ಅವರು ಪ್ರಶಂಸೆ ವ್ಯಕ್ತ ಪಡಿಸಿದರು. ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಜಾಗತಿಕವಾಗಿ ಈ ಕಾಲವನ್ನು ಎದುರಿಸಲು ನಮಗೆ ಉಳಿದಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತ. ನಾವು ಇಂದು ಬಾಬಾ ಸಾಹೇಬ್ ಅವರ ಗುರುತುಗಳನ್ನು ಉಳಿಸಿ ಬೆಳಸಿಕೊಂಡು ಹೋಗಬೇಕು. ಇದನ್ನು ನಾವು ರಾಷ್ಟೀಯ ನಾಟಕೋತ್ಸವ ರೂಪದಲ್ಲಿ ಮಾಡುತ್ತಿದ್ದೇವೆ. ಇಲ್ಲಿಗೆ ಭಾರತದ ಬೇರೆ ಬೇರೆ ಭಾಗದಿಂದ 24 ನಾಟಕ ತಂಡಗಳು ಬಂದು ಭಾಗವಹಿಸುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಮಾತ್ರ ಸೀಮಿತವಲ್ಲ ಎಂದು ತಿಳಿಸಿದರು. ವಿಶ್ವದ ಯಾವುದೇ ಮೂಲೆಯಲ್ಲಿ ದ್ವೇಷ ಅಸೂಯೆ ಕೀಳರಿಮೆಗೆ ಒಳಗಾಗಿ ಶೋಷಣೆಗೆ ಒಳಗಾಗಿರುವ ಕಡೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ನೆರವಿಗೆ ಬರುತ್ತವೆ. ಬಹುರೂಪಿ ನಾಟಕೋತ್ಸವವನ್ನು ನಾವು ಹಲವು ಆಯಾಮಗಳಲ್ಲಿ ರೂಪಿಸಿದ್ದೇವೆ. ಮಕ್ಕಳಿಗಳಾಗಿ ಮಕ್ಕಳ ನಾಟಕೋತ್ಸವ ರೂಪಿಸಿದ್ದೇವೆ. ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದೇವೆ ಎಂದು ಮಾಹಿತಿ ಅವರು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಮಣಿಪುರದ ಖ್ಯಾತ ನಟಿ ಹೈಸ್ಮಾ ಸಾವಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಮೊದಲಾದವರು ಇದ್ದರು. ಮೊದಲ ದಿನ ನಾಟಕ, ನೃತ್ಯಗಳ ಝಲಕ್ನಗರದ ರಂಗಾಯಣವು ಪ್ರತಿವರ್ಷ ಆಯೋಜಿಸುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭೂಮಿಗೀತ ದಲ್ಲಿ ಮೈಸೂರಿನ ರಂಗಾಯಣ ರೆಪರ್ಟರಿ ಕಲಾವಿದರು ಕೋಟಿಗಾನಹಳ್ಳಿ ರಾಮಯ್ಯ ರಚನೆಯ ಅಂಬೇಡ್ಕರ್ ಕೊಲಾಜ್ ನಾಟಕವನ್ನು ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದರು.ಕಿರು ರಂಗಮಂದಿರದಲ್ಲಿ ಬೆಂಗಳೂರಿನ ಬುತಾಯ್ ಟ್ರಸ್ಟ್‌ಕಲಾವಿದರು ಉಜ್ವಲ್‌ರಾವ್ ನಿರ್ದೇಶನದಲ್ಲಿ ಮೈಕ್ ಕೆನ್ನಿ ರಚನೆಯ ಬ್ಯಾಗ್‌ಡ್ಯಾನ್ಸಿಂಗ್ ಇಂಗ್ಲಿಷ್ ನಾಟಕ ಪ್ರದರ್ಶಿಸಿದರು. ಕಲಾಮಂದಿರದಲ್ಲಿ ನೆನಪು ಕಲ್ಚರಲ್ ಮತ್ತು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ತಂಡದವರು, ಪುನೀತ್‌ಕರ್ತ ಅವರ ರಂಗಪಠ್ಯ ಮತ್ತು ನಿರ್ದೇಶನದ ಮೂಲ ವಿಲಿಯಂ ಶೇಕ್ಸ್ ಪಿಯರ್ ಅವರ ಮಾಯಾದ್ವೀಪ ನಾಟಕ ಪ್ರದರ್ಶಿಸಿದರು.ಕಿಂದರಿಜೋಗಿ ಆವರಣದಲ್ಲಿ ತಮಿಳುನಾಡು ಕಲಾವಿದರು ತಮ್ಮ ನಾಡಿನ ಪಾರಂಪರಿಕ ನೃತ್ಯ ಪ್ರದರ್ಶಿಸಿ ಜನಮನ್ನಣೆ ಗಳಿಸಿದರು.