ಕನ್ನಡಪ್ರಭ ವಾರ್ತೆ ಮೈಸೂರುದೇಶದಲ್ಲಿ ಹಲವು ಭಾಷೆ, ಪ್ರದರ್ಶಕ ಕಲೆಗಳಿವೆ. ನಮ್ಮ ಸಂಸ್ಕೃತಿಯ ಹಿರಿಮೆಯೇ ಇವುಗಳ ಮಿಶ್ರಣ ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು.ನಗರದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯಿಂದ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.ರಂಗಭೂಮಿ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತದೆ. ರಂಗಭೂಮಿಯು ದೇಶಾತೀತ ಮತ್ತು ಧರ್ಮಾತೀತವಾಗಿದೆ ಎಂದರು.ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಸ್. ಧನರಾಜು ಮಾತನಾಡಿ, ಕಲೆ, ಸಾಹಿತ್ಯ ನಮ್ಮನ್ನು ಒಗ್ಗೂಡಿಸುತ್ತದೆ. ದೇಶದ ವೈವಿಧ್ಯತೆ ಉಳಿಸುವುದು, ಇತರರ ವೈವಿಧ್ಯತೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಅಮೆರಿಕದ ಬೇಲರ್ ವಿಶ್ವವಿದ್ಯಾಲಯದ ವಸ್ತ್ರ ವಿನ್ಯಾಸಕಾರ್ತಿ ಪ್ರೊ. ಸಾರಾ ಮೋರ್ಷ, ವೇದಿಕೆ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್ ಇದ್ದರು.