ದರ್ಶನ್ ಗೆ ಜಾಮೀನು ವಿಳಂಬ, ಮಾಡಿದ ಪಾಪ ಕಳೆಯಬೇಕಿದೆ: ಕೋಡಿಶ್ರೀ ಭವಿಷ್ಯ

KannadaprabhaNewsNetwork | Published : Oct 17, 2024 12:57 AM

ಸಾರಾಂಶ

ರಾಜ್ಯ ಹಾಗೂ ದೇಶದಲ್ಲಿ ಇನ್ನೂ ಮಳೆ ಹೆಚ್ಚಾಗಲಿದೆ. ದೊಡ್ಡ ದೊಡ್ಡ ನಗರ ಹಾಗೂ ರಸ್ತೆಗಳು ಜಲಾವೃತವಾಗಲಿವೆ, ಪ್ರಾಣಿ ಸಂಕುಲಕ್ಕೆ ಅಪಾಯ ಆಗುವ ಸಂಭವವಿದೆ, ವಿಶೇಷವಾಗಿ ಕಾಲಭೈರವ ಅಸಂತೋಷಗೊಂಡಿದ್ದು, ಅವನ ಕುಲ ಶ್ವಾನಗಳು ಜನರಿಗೆ ಬಹಳ ತೊಂದರೆ ಕೊಡುತ್ತಿವೆ. ಶ್ವಾನಗಳಿಗೆ ಊಟ ಹಾಕುವುದರ ಮೂಲಕ ಕಾಲಭೈರವನ ಶಾಂತಿ ಮಾಡಬೇಕಿದೆ. ಭೂಮಿಯಿಂದ ಜೀವಜಲ ಉಕ್ಕಲಿದೆ, ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರಲಿದ್ದು, ಜನ ಎಚ್ಚರದಿಂದ ಇರಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ನೆಲೆಸಿರುವ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಿಕ್ಕಗೆರಿಗರೆಡ್ಡಿ ಅವರ ಮನೆಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪಾದಪೂಜೆ ಸ್ವೀಕರಿಸಿದರು.

ನಂತರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ಜಾಮೀನು ವಿಳಂಬ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಪಾಪದ ಪಾಶ ಉಕ್ಕಿದರೆ ಪಶ್ಚಾತ್ತಾಪ ಆಗಲಿದೆ. ಪಾಯಸಕ್ಕೆ ಹಾಕಿದ ಬೆಲ್ಲದ ಕೊಳೆ ಉಕ್ಕಬೇಕು, ತಾನು ಮಾಡಿದ ಪಾಪ ಹೋಗಬೇಕು, ತಾ ಮಾಡಿದ ಕರ್ಮ ಬಲವಂತವಾದರೆ ಯಾರೇನು ಮಾಡುವರು? ಎನ್ನುವುದರ ಮೂಲಕ ನಟ ದರ್ಶನ್ ಗೆ ಜಾಮೀನು ಇನ್ನೂ ವಿಳಂಬವಾಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಇನ್ನು ಮುಡಾ ಪ್ರಕರಣದ ಬಗ್ಗೆ ಮಾತನಾಡಿ, ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೈವ ಬಲವಿಲ್ಲ. ಹೀಗಾಗಿ ಅವರಿಗೆ ವಿರೋಧಿಗಳು ನೋವು ಕೊಟ್ಟು ತೊಂದರೆ ಮಾಡಿದ್ದಾರೆ ಎಂದು ಶ್ರೀಗಳು ಹೇಳಿದರು. ಅಂದು ಮಹಾಭಾರತದಲ್ಲಿ ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನ ದಾರವನ್ನು ಕರ್ಣನ ಕೈಯಲ್ಲಿ ಮೋಸದಿಂದ ಕತ್ತರಿಸುತ್ತಾರೆ. ಮುಡಾ ಪ್ರಕರಣದಲ್ಲಿ ಇದೇ ರೀತಿ ಸಿದ್ದರಾಮಯ್ಯ ಅವರ ಹೆಂಡತಿ ರಂಗ ಪ್ರವೇಶ ಮಾಡಿದ್ದಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಭೀಮ ಗೆದ್ದ, ಈಗ ಕೃಷ್ಣನ ಬಲ ಇಲ್ಲ, ದುರ್ಯೋಧನ ಗೆಲ್ತಾನೆ, ಅದೇ ರೀತಿ ಸಿದ್ದರಾಮಯ್ಯಗೆ ವಿರೋಧಿಗಳು ತೊಂದರೆ ಕೊಡುತ್ತಿದ್ದಾರೆ, ಅವರ ಹೆಂಡತಿ ಆಚೆ ಬರದವಳು ಆಚೆ ಬರುವಂತಾಯಿತು, ಜಗತ್ತು ನೋಡುವಂತಾಯಿತು ಎಂದು ಮಾರ್ಮಿಕವಾಗಿ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯದ ಬಗ್ಗೆ ನುಡಿದರು.

ರಾಜ್ಯ, ದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ:

ರಾಜ್ಯ ಹಾಗೂ ದೇಶದಲ್ಲಿ ಇನ್ನೂ ಮಳೆ ಹೆಚ್ಚಾಗಲಿದೆ. ದೊಡ್ಡ ದೊಡ್ಡ ನಗರ ಹಾಗೂ ರಸ್ತೆಗಳು ಜಲಾವೃತವಾಗಲಿವೆ, ಪ್ರಾಣಿ ಸಂಕುಲಕ್ಕೆ ಅಪಾಯ ಆಗುವ ಸಂಭವವಿದೆ, ವಿಶೇಷವಾಗಿ ಕಾಲಭೈರವ ಅಸಂತೋಷಗೊಂಡಿದ್ದು, ಅವನ ಕುಲ ಶ್ವಾನಗಳು ಜನರಿಗೆ ಬಹಳ ತೊಂದರೆ ಕೊಡುತ್ತಿವೆ. ಶ್ವಾನಗಳಿಗೆ ಊಟ ಹಾಕುವುದರ ಮೂಲಕ ಕಾಲಭೈರವನ ಶಾಂತಿ ಮಾಡಬೇಕಿದೆ. ಭೂಮಿಯಿಂದ ಜೀವಜಲ ಉಕ್ಕಲಿದೆ, ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರಲಿದ್ದು, ಜನ ಎಚ್ಚರದಿಂದ ಇರಬೇಕು ಎಂದರು.

Share this article