ಗಿರೀಶ್ ಗರಗ
ಕಳೆದ ಎರಡ್ಮೂರು ವರ್ಷದಿಂದ ಚರ್ಚೆಯಲ್ಲಿರುವ ಬೈಯಪನಹಳ್ಳಿ ರೋಟರಿ (ವೃತ್ತಾಕಾರ) ಮೇಲ್ಸೇತುವೆಯ ಯೋಜನಾ ವೆಚ್ಚವನ್ನು ಹಿಗ್ಗಿಸಿ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ, ಹೆಚ್ಚಾದ ಯೋಜನಾ ವೆಚ್ಚವನ್ನು 2024-25ನೇ ಸಾಲಿನಲ್ಲಿ ಪಡೆದುಕೊಳ್ಳುವಂತೆಯೂ ಸೂಚಿಸಿದೆ.
ಬೈಯಪನಹಳ್ಳಿ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಬರುವ ವಾಹನ ಸವಾರರ ಅನುಕೂಲಕ್ಕಾಗಿ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆ ಯೋಜನೆ ಜಾರಿಗೆ ಬಿಜೆಪಿ ಸರ್ಕಾರವಿದ್ದಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಯೋಜನೆಗೆ ಸಂಬಂಧಿಸಿದಂತೆ ಅನುದಾನ ನಿಗದಿ ಸೇರಿ ಇನ್ನಿತರ ಕಾರಣಗಳಿಂದಾಗಿ ಮೇಲ್ಸೇತುವೆ ನಿರ್ಮಾಣ ಸಾಧ್ಯವಾಗಿರಲಿಲ್ಲ. 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಮೀಸಲಿಡಲಾಗಿತ್ತಾದರೂ, ಯೋಜನೆ ಜಾರಿಯಾಗಿರಲಿಲ್ಲ. ಇದೀಗ ಯೋಜನೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಅದಕ್ಕಾಗಿ ₹117 ಕೋಟಿ ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ.₹263 ಕೋಟಿಯಿಂದ ₹380 ಕೋಟಿಗೆ ಹೆಚ್ಚಳ:
ಆದರೆ, 2023ರ ಜುಲೈನಲ್ಲಿ ಇಂಧಿನ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ನಡೆದ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರೋಟರಿ ಮೇಲ್ಸೇತುವೆಯ ಇಳಿಯುವ ಸ್ಥಳವನ್ನು ಮುಕುಂದ ಚಿತ್ರಮಂದಿರದ ಬದಲು ಐಟಿಸಿ ಸಂಸ್ಥೆ ಇರುವಲ್ಲಿ ಇಳಿಯುವಂತೆ ವಿಸ್ತರಿಸಲು ತೀರ್ಮಾನಿಸಲಾಯಿತು. ಆ ಹಿನ್ನೆಲೆಯಲ್ಲಿ ಮೇಲ್ಸೇತುವೆಯ ಉದ್ದ 1.50 ಕಿ.ಮೀ. ಹೆಚ್ಚಾಗಿದ್ದಲ್ಲದೆ, ಅದರಿಂದ ಯೋಜನಾ ವೆಚ್ಚ ₹117 ಕೋಟಿ ಹೆಚ್ಚುವಂತಾಗಿದೆ.ಯುಟಿಲಿಟಿ ಸ್ಥಳಾಂತರಕ್ಕೆ
ಮೇಲ್ಸೇತುವೆಯ ಉದ್ದ ಹೆಚ್ಚಾದ ಕಾರಣದಿಂದಾಗಿ ಜಿಎಸ್‌ಟಿ ಮೊತ್ತ, ಯುಟಿಲಿಟಿ ಸ್ಥಳಾಂತರ, ಡಿಪಿಆರ್ ಶುಲ್ಕಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವಂತಾಗಿದೆ. ಮೇಲ್ಸೇತುವೆ ಕಾಮಗಾರಿಯ ಮೊತ್ತವನ್ನು ಈ ಹಿಂದೆ ₹148.67 ಕೋಟಿಗೆ ನಿಗದಿ ಮಾಡಲಾಗಿತ್ತು. ಆದರೀಗ ಅದನ್ನು ₹235.03 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಮೇಲ್ಸೇತುವೆ ಕೆಳಭಾಗದಲ್ಲಿನ ರಸ್ತೆ ನಿರ್ಮಾಣದ ಮೊತ್ತವನ್ನು ₹15.27 ಕೋಟಿಯಿಂದ ₹21.18 ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಸದ್ಯ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಷರತ್ತು ಬದ್ಧವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅದರಂತೆ ಹೆಚ್ಚುವರಿ ₹117 ಕೋಟಿ ಅನುದಾನವನ್ನು 2024-25ನೇ ಸಾಲಿನ ಅನುದಾನದಲ್ಲಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ, ಕಾಮಗಾರಿಗಳ ಪ್ರಗತಿಯನ್ನು ಪ್ರತಿ ತಿಂಗಳು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಅಧಿಕಾರಯುಕ್ತ ಸಮಿತಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.