ಮಂಗಳೂರು: ದೇಶದಲ್ಲಿ ಸನಾತನ ಹಿಂದೂ ಧರ್ಮದ ಉಳಿವು, ರಕ್ಷಣೆಗಾಗಿ ಬಜರಂಗಳ ಹಲವು ರೀತಿಯ ಹೋರಾಟಗಳನ್ನು ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದೆ ಎಂದು ಬಜರಂಗದಳ ರಾಷ್ಟ್ರೀಯ ಸಂಯೋಜಕ್ ಕಿಶನ್ ಪ್ರಜಾಪತ್ ಹೇಳಿದರು.
ಬಜರಂಗದಳದ ಹೋರಾಟದಲ್ಲಿ ರಾಮಮಂದಿರದ ನಿರ್ಮಾಣಕ್ಕೆ ನಡೆದ ಹೋರಾಟ ಮುಂಚೂಣಿಯಲ್ಲಿ ನಿಲ್ಲುವಂತದ್ದು. ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗಬೇಕು, ರಾಮ ರಾಜ್ಯ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಮಹತ್ತರ ಉದ್ದೇಶದೊಂದಿಗೆ ಸಂಘರ್ಷದಿಂದ ಹುಟ್ಟಿ ಸಂಘರ್ಷದ ಮೂಲಕ ಕೆಲಸ ಮಾಡುತ್ತಿರುವ ಸಂಘಟನೆಯೇ ಬಜರಂಗದಳ. ಸೇವೆ, ಸುರಕ್ಷತೆ ಮತ್ತ ಸಂಸ್ಕಾರವನ್ನು ತನ್ನ ಧ್ಯೇಯವಾಗಿಸಿದೆ. ಮಂದಿರ ನಿರ್ಮಾಣದೊಂದಿಗೆ ಒಂದು ಹಂತದ ಉದ್ದೇಶ ಈಡೇರಿದೆ. ಪ್ರಸ್ತುತ ಗೋಮಾತೆಯ ರಕ್ಷಣೆ, ಹಿಂದೂ ಹೆಣ್ಮಕ್ಕಳ ರಕ್ಷಣೆ, ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಮಾಜವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಸಂಘಟನೆಯಿಂದ ನಡೆಯಲಿದೆ ಎಂದರು.ಬಜರಂಗದಳ ಕಾರ್ಯಕರ್ತ ಎಂದರೆ ಕೇವಲ ಒಂದು ಗುರುತು ಅಲ್ಲ, ಸಮಾಜ ನಮ್ಮಿಂದ ಅಪೇಕ್ಷೆ ಮಾಡುತ್ತಿದೆ ಎಂದು ಅರ್ಥ. ಹಿಂದೂ ಸಮಾಜದಲ್ಲಿ ಬಜರಂಗದಳ ಒಂದು ಸಶಕ್ತ ಸಂಘಟನೆಯಾಗಿದ್ದು, ದಿನದ 24 ಗಂಟೆಯೂ ಸಮಾಜಕ್ಕಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಸಮಾಜವೂ ಸಂಘಟನೆಗೆ ತನ್ನಿಂದಾಗುವ ಸಹಕಾರ ನೀಡುತ್ತಿದೆ ಎಂದರು. ವಿಶ್ವ ಹಿಂದೂ ಪರಿಷತ್ ಗೌರವ ಸಲಹೆಗಾರ ಎಂ.ಬಿ.ಪುರಾಣಿಕ್ ಮಾತನಾಡಿ, ವಿಶ್ವಾದ್ಯಂತ ಇರುವ ಹಿಂದೂಗಳನ್ನು ಒಗ್ಗೂಡಿಸಿ, ಅವರ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ವೇದಿಕೆಯಾಗಿ ವಿಶ್ವಹಿಂದೂ ಪರಿಷತ್ ಆರಂಭವಾಯಿತು. ಅದರ ಯುವ ವಿಭಾಗವೇ ಬಜರಂಗದಳವಾಗಿದ್ದು, ಧರ್ಮ ಸಂಸ್ಕೃತಿಯ ರಕ್ಷಣೆಯ ಕೆಲಸ ಮಾಡುತ್ತಿದೆ. ಗೋಹತ್ಯೆ, ಲವ್ ಜಿಹಾದ್, ಮತಾಂತರ ಮೊದಲಾದವುಗಳ ವಿರುದ್ಧ ಹೋರಾಟದ ಜತೆಗೆ ಯುವ ಪೀಳಿಗೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು. ವಿಹಿಂಪ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್ ಧ್ವಜಾರೋಹಣ ನೆರವೇರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.ಪ್ರಾಂತ ಕಾರ್ಯದರ್ಶಿ ಸುರೇಶ್ ಬಿ.ಈ, ವಿಎಚ್ ಪಿ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿರಿಯ ಸ್ವಯಂಸೇವಕ ದಿನೇಶ್ ಪೈ, ಬಜರಂಗದಳ ಕ್ಷೇತ್ರೀಯ ಸಂಯೋಜಕ ಕುಮಾರ ಸ್ವಾಮಿ, ಗೋರಕ್ಷಾ ಪ್ರಮುಖ್ ಶಶಾಂತ್ ಮತ್ತಿತರರು ಇದ್ದರು.ಬಜರಂಗದಳ ಪ್ರಾಂತ ಸಂಯೋಜಕ್ ಪ್ರಭಂಜನ್ ಸೂರ್ಯ ಪ್ರಸ್ತಾವಿಕ ಮಾತನಾಡಿದರು. ಆರಂಭದಲ್ಲಿ ಗೋ ಪೂಜೆ ನಡೆಯಿತು.