ಬೆಂಗಳೂರು : ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಎಸ್ಪಿ ಕರಿಬಸನಗೌಡ ಮತ್ತು ಡಿವೈಎಸ್ಪಿ ಮಹೇಶ್‌ ಗೌಡ ವಿರುದ್ಧ ಡಿಸಿಆರ್‌ಇ ಪಶ್ಚಿಮ ಠಾಣೆ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರು ದೌರ್ಜನ್ಯ ಹಾಗೂ ಕಿರುಕುಳದ ಆರೋಪ ಮಾಡಿದ್ದಾರೆ.

ದಲಿತ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರು 5.11 ನಿಮಿಷದ ವಿಡಿಯೋ ಮಾಡಿ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೇಲ್ವರ್ಗದ ಅಧಿಕಾರಿಗಳ ಕಿರುಕುಳದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಈ ಕಿರುಕುಳ ಹೀಗೆ ಮುಂದುವರಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಮುಖ್ಯಮಂತ್ರಿ, ಗೃಹ ಸಚಿವರು, ಡಿಸಿಆರ್‌ಇ ಡಿಜಿಪಿ ಉಮೇಶ್‌ ಕುಮಾರ್‌ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದ್ದಾರೆ.


ಕೆಎಟಿ ಆದೇಶಕ್ಕೆ ವಿರುದ್ಧವಾಗಿ ನಕಲಿ ದಾಖಲೆ:

ಡಿಸಿಆರ್‌ಇಯಲ್ಲಿ ನಾನು ಇನ್ಸ್‌ಪೆಕ್ಟರ್‌ ಆಗಿದ್ದು, ದಲಿತರ ಪರ ಕೆಲಸ ಮಾಡುವುದೇ ತಪ್ಪು ಎನಿಸುತ್ತಿದೆ. ಕಳೆದ ಮಾರ್ಚ್‌ 24ರಂದು ನನ್ನನ್ನು ಡಿಇಆರ್‌ಇಯಿಂದ ಉಡುಪಿಗೆ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ನಾನು ಕೆಎಟಿಯಲ್ಲಿ ತಡೆಯಾಜ್ಞೆ ತಂದಿದ್ದೇನೆ. ಆದರೆ, ಡಿಸಿಆರ್‌ಇ ಎಸ್ಪಿ ಕರಿಬಸನಗೌಡ ಮತ್ತು ಡಿವೈಎಸ್ಪಿ ಮಹೇಶ್‌ ಗೌಡ ಕೆಎಟಿ ಆದೇಶಕ್ಕೆ ವಿರುದ್ಧವಾಗಿ ನನ್ನನ್ನು ಡಿಸಿಆರ್‌ಇಯಿಂದ ಬಿಡುಗಡೆ ಮಾಡಿರುವುದಾಗಿ ನಕಲಿ ದಾಖಲೆ ರವಾನಿಸಿದ್ದಾರೆ. ಈ ಬಗ್ಗೆ ತಾವು ಕೂಲಂಕಷವಾಗಿ ಪರಿಶೀಲಿಸಿ ಎಂದು ಡಿಸಿಆರ್‌ಇ ಡಿಜಿಪಿ ಉಮೇಶ್‌ ಕುಮಾರ್‌ಗೆ ಮನವಿ ಮಾಡಿದ್ದಾರೆ.

ನನ್ನ ಕುಂದು-ಕೊರತೆ ಆಲಿಸುತ್ತಿಲ್ಲ:

ಕಳೆದ 20 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನನಗಾಗುತ್ತಿರುವ ಕಿರುಕುಳ ಬಗ್ಗೆ ತಮ್ಮನ್ನೂ ಮೂರು ಬಾರಿ ಭೇಟಿಯಾಗಿ ಹೇಳಿದ್ದೇನೆ. ಎಸ್ಸಿ-ಎಸ್ಟಿ ಆಯೋಗ, ಸದನ ಸಮಿತಿಗೂ ದೂರು ನೀಡಿದ್ದೇನೆ. 18 ಅಂಶಗಳನ್ನು ಉಲ್ಲೇಖಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೂ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಆದರೆ, ಈವರೆಗೂ ತನಿಖೆಗೆ ಆದೇಶಿಸಿಲ್ಲ ಎಂದು ಬೇಸರ ವ್ಯಕ್ಯಪಡಿಸಿದ್ದಾರೆ.

- ಮೇಲ್ವರ್ಗದ ಅಧಿಕಾರಿಗಳ ಕಿರುಕುಳದಿಂದ ನನಗೆ, ಕುಟುಂಬಕ್ಕೆ ಘಾಸಿ 

ನನ್ನ ವಿರುದ್ಧ ಪಿತೂರಿ ನಿಲ್ಲಿಸಿ ಇಲ್ಲವಾದರೆ....

ಮೇಲಧಿಕಾರಿಗಳ ಕಿರುಕುಳದಿಂದ ಸಾಕಷ್ಟು ನೋವಾಗಿದೆ. ದಲಿತ ಅಧಿಕಾರಿಗೆ ರಕ್ಷಣೆ ಇಲ್ಲದಂತಾಗಿದೆ. ಮುಂದಿನ ಅವಘಡಗಳಿಗೆ ಅವಕಾಶ ಮಾಡಿಕೊಡಬೇಡಿ. ನನ್ನ ವಿರುದ್ಧ ಒಳಸಂಚು, ಷಡ್ಯಂತ್ರ, ಪಿತೂರಿ ಮಾಡಬೇಡಿ. ನಾನೊಬ್ಬ ನೊಂದ ದಲಿತ ಪೊಲೀಸ್‌ ಅಧಿಕಾರಿ. ಕೆಎಟಿ ಆದೇಶ ಬಂದ ಬಳಿಕ ಅದಕ್ಕೆ ನಾನು ತಲೆ ಬಾಗುತ್ತೇನೆ. ನೀವೂ ತಲೆಬಾಗಬೇಕು. ತರಾತುರಿಯಲ್ಲಿ ಪಿತೂರಿ ಮಾಡಿ ಬೇರೆ ಏನಾದರೂ ಮಾಡುವುದಕ್ಕೆ ಇತಿಶ್ರೀ ಹಾಡಿ. ಇಲ್ಲವಾದರೆ, ಮುಂದಾಗುವ ಪರಿಣಾಮಗಳಿಗೆ ನೀವೆಲ್ಲಾ ಕಾರಣರಾಗುವಿರಿ ಎಂದು ಪರೋಕ್ಷವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಕೆಲ ಐಪಿಎಸ್‌ಗಳ ಕರ್ಮಕಾಂಡ ಬಯಲು ಮಾಡುತ್ತೇನೆ: ಡಿಸಿಆರ್‌ಇ ಎಸ್ಪಿ ಕಾಶಿ

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಸೇರಿ ಕೆಲ ಐಪಿಎಸ್‌ ಅಧಿಕಾರಿಗಳ ದೌರ್ಜನ್ಯವನ್ನು ಎಳೆಎಳೆಯಾಗಿ ಬಹಿರಂಗಪಡಿಸಲು ಅನುಮತಿ ನೀಡುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ(ಡಿಸಿಆರ್‌ಇ) ಬೆಂಗಳೂರು ನಗರ ವಲಯದ ಎಸ್ಪಿ ಎಸ್‌.ಎಸ್‌.ಕಾಶಿ ಅವರು ರಾಜ್ಯ ಪೊಲೀಸ್‌ ಮಹಾನಿರ್ದೇರ್ಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್‌ ಅಧಿಕಾರಿಗಳು ತಮ್ಮ ಅಧಿಕಾರ ಬಲದಿಂದ ಕೆಳಹಂತದ ಅಧಿಕಾರಿಗಳು/ಸಿಬ್ಬಂದಿ ಮೇಲೆ ದರ್ಪ, ತಾರತಮ್ಯ, ಸ್ವಜನ ಪಕ್ಷಪಾತದಂತಹ ಪ್ರವೃತ್ತಿಗಳನ್ನು ತೋರುತ್ತಿರುತ್ತಾರೆ. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೆಲ ಐಪಿಎಸ್‌ ಅಧಿಕಾರಿಗಳು ಮೂಲತಃ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ಅಧಿಕಾರಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ವಿಪರೀತ ದರ್ಪ ತೋರಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ.

ನೀವು ಒಬ್ಬ ಅಪ್ಪಟ ಕನ್ನಡ ನಾಡಿನ ಅಧಿಕಾರಿಯಾಗಿದ್ದು, ನಿಮ್ಮಿಂದ ನ್ಯಾಯ ಸಿಗುತ್ತದೆ ಎಂಬ ಮಹೋನ್ನತ ಉದ್ದೇಶದಿಂದ ಈ ಬಗ್ಗೆ ನನ್ನ ಅಹವಾಲನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ಹಲವು ಬಾರಿ ನಿಮಗೆ ತಿಳಿಸಿರುತ್ತೇನೆ. ನಾನು ಸದರಿ ವಿಚಾರವನ್ನು ಪ್ರಸ್ತಾಪಿಸಿದಾಗ ತಾವು ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶೇ.20ರಷ್ಟು ಮಾತ್ರ ಯಶಸ್ವಿಯಾಗಿದ್ದು, ಇನ್ನೂ ಶೇ.80ರಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

30 ನಿಮಿಷ ಕಾಲಾವಕಾಶ ಕೊಡಿಸಿ:

ಹೀಗಾಗಿ ಹೊರ ರಾಜ್ಯದಿಂದ ಕನ್ನಡಿಗರ ಸೇವೆಗೆಂದು ಬಂದು ಕನ್ನಡಿಗರಿಂದ ಕೂಲಿ ಪಡೆಯುತ್ತಿರುವ ಮಂಗಳೂರು ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಅವರ ಕರ್ಮಕಾಂಡಗಳು, ಅಧೀನ ಅಧಿಕಾರಿ/ಸಿಬ್ಬಂದಿಗೆ ನೀಡಿರುವ ಕಿರುಕುಳಗಳು, ಮಾಡಿರುವ ದೌರ್ಜನ್ಯಗಳು ಹಾಗೂ ಇತರೆ ಕೆಲ ಐಪಿಎಸ್‌ ಅಧಿಕಾರಿಗಳ ಕರ್ಮಕಾಂಡವನ್ನು ಮತ್ತು ಕರ್ನಾಟಕದಲ್ಲಿ ಕನ್ನಡಿಗ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗಳು ಮತ್ತು ತಮ್ಮ ಸಮಕ್ಷಮದಲ್ಲಿ ಎಳೆಎಳೆಯಾಗಿ ತೆರೆದಿಡುತ್ತೇನೆ.

ಹೀಗಾಗಿ ನನಗೆ ಏ.18ರಿಂದ ಏ.29ರೊಳಗೆ ಒಂದು ದಿನಾಂಕ ನಿಗದಿ ಮಾಡಿ 30 ನಿಮಿಷ ಕಾಲಾವಕಾಶ ಕೊಡಿಸುವಂತೆ ಎಸ್‌.ಎಸ್‌.ಕಾಶಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.