ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ

KannadaprabhaNewsNetwork |  
Published : Jun 08, 2025, 02:37 AM IST
ಚಿತ್ರ :  7ಎಂಡಿಕೆ5 : ಕಂಡಕರೆಯಲ್ಲಿ ಮುಸ್ಲಿಮ್ ಸಮುದಾಯದವರು ಸಂಭ್ರಮದಿಂದ ಬಕ್ರೀದ್ ಆಚರಿಸಿದರು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿವಿಧೆಡೆ ಬಕ್ರೀದ್‌ ಅನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಸಮಾಜ ಬಾಂಧವರು ಶುಭಾಶಯ ವಿನಿಮಯ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ವಿವಿಧೆಡೆ ಮುಸ್ಲಿಂ ಸಮುದಾಯದವರಿಂದ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಅನ್ನು ಭಕ್ತಿಭಾವದಿಂದ ಶನಿವಾರ ಸಂಭ್ರಮದಿಂದ ಆಚರಿಸಿದರು.

ನಗರದ ಜಾಮೀಯಾ ಮಸೀದಿ, ಬದ್ರಿಯಾ ಮಸೀದಿ, ಎಂ.ಎಂ ಮಸೀದಿ, ಮಕ್ಕಾ ಮಸೀದಿ, ಮದೀನಾ ಮಸೀದಿ, ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಹೊಸಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪುಟ್ಟ ಮಕ್ಕಳು ಸೇರಿದಂತೆ ಸಮಾಜಬಾಂಧವರು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

ಪ್ರವಾದಿ ಇಬ್ರಾಹಿಮ್ ಅವರು ಹಾಗೂ ಅವರ ಕುಟುಂಬದ ತ್ಯಾಗ ಜೀವನ ಸ್ಮರಣೆಯ ಭಾಗವಾಗಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರವಾದಿ ಇಬ್ರಾಹಿಮ್‌ ಅವರು ತಮ್ಮ ಕಾಲದಲ್ಲಿ ಜನರ ಮೇಲೆ ನಡೆಯುತ್ತಿದ್ದ ಶೋಷಣೆ, ಮಹಿಳೆಯರಿಗಾಗುತ್ತಿದ್ದ ದೌರ್ಜನ್ಯ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿದ್ದ ಮೌಡ್ಯಗಳ ವಿರುದ್ಧ ಧ್ವನಿ ಎತ್ತಿದ್ದರು ಎಂದು ಧರ್ಮಗುರು ಉಮರ್ ಮೌಲವಿಯವರು ಹೇಳಿದರು.

ಯುವ ಜನತೆ ಎಚ್ಚರದಿಂದಿರಬೇಕು:

ಮಡಿಕೇರಿ ಕಾಲೇಜು ರಸ್ತೆಯ ಸಿ.ಪಿ.ಸಿ ಲೇಔಟ್‌ನಲ್ಲಿರುವ ಮಸ್ಜಿದ್ ರಹ್ಮಾ ಮಸೀದಿಯಲ್ಲಿ ನಡೆದ ಈದುಲ್ ಅಝ್ಹ ನಮಾಜ್‌ ನಂತರ ವಿಶೇಷ ಪ್ರವಚನ ನೀಡಿದ ಅವರು, ಅಂದಿನ ಪ್ರಭುತ್ವ ಪ್ರವಾದಿ ಇಬ್ರಾಹಿಮ್‌ ಉರಿಯುತ್ತಿರುವ ಅಗ್ನಿ ಕುಂಡಕ್ಕೆ ಎಸೆದರೂ ದೇವನ ಅಪಾರ ಅನುಗ್ರಹದಿಂದ ಪವಾಡದೃಶರಾಗಿ ಪಾರಾಗಿ ಬಂದ ಘಟನೆ ಇತಿಹಾಸ ಇಂದಿಗೂ ಮೆಲುಕು ಹಾಕುತ್ತದೆ. ಪ್ರಸ್ತುತ ಇಂದು ಭಾರತ ದೇಶದ ಕಿರೀಟ ಕಾಶ್ಮೀರದಲ್ಲಿ ಭಯೋತ್ಪಾದನೆ ದಾಳಿ ನಡೆಯುತ್ತಿದೆ. ಜೀವನದ ಉತ್ತಮ ಕ್ಷಣಗಳನ್ನು ಕಳೆಯಲು ತೆರಳಿದ ಮುಗ್ಧ ಪ್ರವಾಸಿಗರ ಮೇಲೇ ನಡೆಸಿದ್ದಾರೆ. ಇಂತಹ ಕೃತ್ಯಗಳನ್ನು ದೇವನು ಎಂದಿಗೂ ಮೆಚ್ಚುವುದಿಲ್ಲ ಎಂದ ಅವರು, ನೆರೆ ಜಿಲ್ಲೆಯಲ್ಲಿ ಕೋಮು ಗಲಭೆ ಹಾಗೂ ನಿರಪರಾಧಿಗಳ ಹತ್ಯೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಇಂತಹ ಮನಸ್ಥಿತಿಗೆ ಸ್ವಾರ್ಥ ಹಾಗೂ ನೀಚ ರಾಜಕಾರಣವೇ ಮೂಲ ಕಾರಣವಾಗಿದೆ. ದಯವಿಟ್ಟು ಯುವ ಜನತೆ ಇವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.

ಇಡೀ ಸಮಾಜವನ್ನೇ ಮಲೀನ ಗೊಳಿಸುತ್ತಿದೆ:

ಮದ್ಯ ವ್ಯಸನಕ್ಕಿಂತಲೂ ಅಪಾಯಕಾರಿಯಾಗಿರುವ ಮಾದಕ ವಸ್ತು ಸೇವನೆಯು ಕುಟುಂಬ ಮಾತ್ರವಲ್ಲ ಇಡೀ ಸಮಾಜವನ್ನೇ ಮಲೀನ ಗೊಳಿಸುತ್ತಿದೆ. ಇಂದು ಮಾದಕ ವಸ್ತು ಎಂಬುದು ಕೇವಲ ಪುರುಷರು ಮಾತ್ರವಲ್ಲ ಮಹಿಳೆಯರೂ ಕೂಡ ಇದರ ದಾಸರಾಗುತ್ತಿದ್ದು, ಆತಂಕಕಾರಿಯಾಗಿದೆ. ನಾಡಿನ ಜನರು ಜಾತಿ, ಧರ್ಮ ಮರೆತು ಪರಸ್ಪರ ಪ್ರೀತಿ ವಿಶ್ವಾಸ, ಕಾರುಣ್ಯ ಹಾಗೂ ಸಹಕಾರದೊಂದಿಗೆ ಸಾಗಿದಾಗ ನಮನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಮಡಿಕೇರಿ ನಗರದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಜಾಮೀಯಾ ಮಸೀದಿ ಇಮಾಮ್ ನಸೀಮ್ ಅಕ್ತರ್ ರಝಾ, ಗಣಪತಿ ಬೀದಿಯಲ್ಲಿರುವ ಬದ್ರಿಯಾ ಮಸೀದಿ ನೌಶಾದ್ ಸಖಾಪಿ ಹಾಗೂ ಮಲಬಾರ್ ಮಸೀದಿ ಹಮೀದ್ ಮದನಿ ಮಹದೇವ ಪೇಟೆಯ ಭಟ್ಕಲ್ ಮಸೀದಿ ಅಲೀ ಮುಸ್ಲಿಯರ್, ಮಕ್ಕ ಮಸೀದಿ, ಮೌಲಾನ ಹಕೀಮ್ ದೀನ ಮಸೀದಿ ಅಬ್ದುಲ್ ಖಯ್ಯೂಮ್ ಹಾಗೂ ಲಾಷ್ಕರ ಮಸೀದಿಯಲ್ಲಿ ಮೌಲಾನ ಸಲ್ಮಾನ್ ಅಹಮದ್ ನೇತೃತ್ವದಲ್ಲಿ ನಮಾಜ್‌ ನೆರವೇರಿತು.

ಸಲಫಿ ಮಸೀದಿಯಲ್ಲಿ ಧರ್ಮಗುರು ಸಲಾಲುದೀನ್ ಚುಲೇಲಿ ಅವರು ನಿರ್ವಹಿಸಿದರು.

ಕಂಡಕರೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

ಚೆಟ್ಟಳ್ಳಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವನ್ನು ಕಂಡಕರೆಯಲ್ಲಿ ಮುಸ್ಲಿಮ್ ಸಮುದಾಯದವರು ಸಂಭ್ರಮದಿಂದ ಆಚರಣೆ ಮಾಡಿದರು.

ಈದ್ ನಮಾಝ್ ಗೆ ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ ನೇತೃತ್ವ ವಹಿಸಿದರು‌.

ಈದ್ ನಮಾಜ್ ಬಳಿಕ ಮರಣ ಹೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಮಹಲ್ ಕಮಿಟಿ ಅಧ್ಯಕ್ಷರಾದ ಆಲಿ ಮುಸ್ಲಿಯಾರ್ ಹಾಜಿ, ಪ್ರಧಾನ ಕಾರ್ಯದರ್ಶಿ ಸರ್ಫುದ್ದೀನ್, ಉಪಾಧ್ಯಕ್ಷ ಕೆ.ಎ ಹುಸೈನ್, ಸಹ ಕಾರ್ಯದರ್ಶಿ ಅಬ್ದುಲ್ ಗಫೂರ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ