ವಿಶ್ವಾಸ, ವಿಧೇಯತೆ ಮತ್ತು ತ್ಯಾಗದ ಹಬ್ಬ ಬಕ್ರೀದ್

KannadaprabhaNewsNetwork |  
Published : May 29, 2026, 02:00 AM IST
ಧಾರವಾಡದ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್‌ ಹಬ್ಬದ ಸಾಮೂಹಿಕ ಪ್ರಾರ್ಥನೆ. | Kannada Prabha

ಸಾರಾಂಶ

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬವನ್ನು ಗುರುವಾರ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧಾರವಾಡ:

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬವನ್ನು ಗುರುವಾರ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಈದ್ಗಾ ಮೈದಾನ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಈದ್ಗಾ ಮೈದಾನ, ಮಸೀದಿಗಳಲ್ಲಿ ಮುಸ್ಲಿಂ ಬಂಧುಗಳು ಹೊಸ ಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನನ್ನೇ ದೇವರಿಗೆ ಬಲಿ ಕೊಡಲು ಮುಂದಾದಾಗ, ಅಲ್ಲಾಹನು ಅವರ ತ್ಯಾಗ ಮೆಚ್ಚಿ ಮಗನ ಬದಲಾಗಿ ಕುರಿ ಬಲಿ ನೀಡುವಂತೆ ಪವಾಡ ಮಾಡಿದನು ಎಂದು ನಂಬಲಾಗಿದೆ.

ಬಡವರಿಗೆ ದಾನ ಮಾಡುವುದು ಈ ಹಬ್ಬದ ವಿಶೇಷತೆ. ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಅಪ್ಪಿಕೊಂಡು ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ನಿಮಿತ್ತ ಮನೆಗಳಲ್ಲಿ ಶೀರ್-ಕುರ್ಮಾ ಹಾಗೂ ಇತರೆ ಸಿಹಿ ತಿನಿಸು ತಯಾರಿಸಿ ಹಂಚಲಾಯಿತು.

ತಾಲೂಕಿನ ಅಮ್ಮಿನಬಾವಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಹಬ್ಬದ ಸಂದೇಶ ನೀಡಿದ ಗ್ರಾಮದ ಜುಮ್ಮಾ ಮಸೀದಿಯ ಇಸ್ಲಾಂ ಧರ್ಮಗುರು ಜಹೀರ್ ಅಬ್ಬಾಸ್ ಖಾದ್ರಿ, ಪರಸ್ಪರರಲ್ಲಿ ವಿಶ್ವಾಸ, ವಿಧೇಯತೆ ಮತ್ತು ತ್ಯಾಗದ ಮೌಲ್ಯಗಳನ್ನು ಬೆಳೆಸಲು ಈದ್-ಉಲ್-ಅಧಾ ಬಕ್ರೀದ್ ಹಬ್ಬವು ದಿಕ್ಸೂಚಿಯಾಗಿದೆ. ನಿತ್ಯದ ಪ್ರಾರ್ಥನೆಯೂ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಅಲ್ಹಾನ ಸನ್ನಿಧಿಗೆ ಸಲ್ಲಿಸುವ ಪ್ರಾರ್ಥನೆಯು ಮುಕ್ತ ಮನಸ್ಸು ಮತ್ತು ಅಚಲ ಭಕ್ತಿಯಿಂದ ಕೂಡಿರಬೇಕು ಎಂದರು.

ಅಮ್ಮಿನಬಾವಿ ಜಮಾತ ಅಧ್ಯಕ್ಷ ಮೊಹಮ್ಮದ್‌ಆರೀಫ್ ಯಲಿಗಾರ, ಸಮಾಜದ ಹಿರಿಯರಾದ ಮಕ್ತುಂಹುಸೇನ ಶಿರಸಂಗಿ, ಅಬ್ದುಲ್‌ರಶೀದ್ ಕಿತ್ತೂರ, ಹಸನಸಾಬ ನರಗುಂದ, ಮೆಹಬೂಬಸಾಬ ತಂಬೋಲಿ, ಮೊಹಮ್ಮದಖಾಸೀಂ ಬಾಂಗಿ, ಗಫಾರಸಾಬ ಶಿರಸಂಗಿ, ವಜೀರಸಾಬ ನದಾಫ್, ಬುಡ್ಡೇಸಾಬ ಪಠಾಣ, ಮೊಹಮ್ಮದರಫೀಕ್ ವಟ್ನಾಳ ಸೇರಿದಂತೆ ನೂರಾರು ಜನ ಇಸ್ಲಾಂ ಬಂಧು-ಮಿತ್ರರು ಸಾಮೂಹಿಕ ಪ್ರಾರ್ಥನೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ