ಲಕ್ಷ್ಮೇಶ್ವರ: ಯಾವುದೇ ಫಲಾಪೇಕ್ಷೆಯಿಲ್ಲದೆ ದಾನ ಮಾಡುವ ಅಪರೂಪದ ಗುಣ ಎಲ್ಲರಲ್ಲ ಇರುವುದಿಲ್ಲ. ಅನ್ನ, ಅಕ್ಷರ ಹಾಗೂ ವಸತಿಗೆ ನೀಡುವ ದಾನ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ತಿಳಿಸಿದರು.

ಸಮೀಪದ ಹೂವಿನಶಿಗ್ಲಿಯ ವಿರಕ್ತಮಠದ ಗುರುಕುಲದ ವಿದ್ಯಾರ್ಥಿಗಳಿಗಾಗಿ ಸುಮಾರು ₹16 ಲಕ್ಷ ಮೌಲ್ಯದ ದವಸ ಧಾನ್ಯಗಳನ್ನು ದಾನ ನೀಡಿದ ಬೀದರ ಜಿಲ್ಲೆಯ ಸೋನಾಳ ಗ್ರಾಮದ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಹೂವಿನಶಿಗ್ಲಿಯ ವಿರಕ್ತಮಠದ ಗುರುಕುಲದಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡುತ್ತಿದ್ದಾರೆ. ತಂದೆ- ತಾಯಿಗಳನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಉಚಿತವಾಗಿ ವಸತಿಸಹಿತ ಅನ್ನ, ಅಕ್ಷರ ಅಭ್ಯಾಸ ಕಲಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದೇವೆ. ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿನಿತ್ಯ ಸಾವಿರಾರು ರುಪಾಯಿಗಳು ಖರ್ಚಾಗುತ್ತಿದ್ದರೂ ಅದನ್ನು ಶ್ರೀಮಠದ ಭಕ್ತರ ಸಹಾಯ ಸಹಕಾರದಿಂದ ನಡೆಸುತ್ತಿದ್ದೇವೆ ಎಂದರು.

ಬೀದರ ಜಿಲ್ಲೆಯ ಸೋನಾಳ ಗ್ರಾಮದ ವಿಜಯಕುಮಾರ ಬಿರಾದಾರ ಅವರು ಪುಣೆಯಲ್ಲಿ ಉದ್ಯಮಿಯಾಗಿದ್ದಾರೆ. ಇವರು ಕಳೆದ 2021ರಿಂದ ಶ್ರೀಮಠದ ಮಕ್ಕಳ ಅನ್ನ ದಾಸೋಹಕ್ಕಾಗಿ ಪ್ರತಿವರ್ಷ ಸುಮಾರು ₹16 ಲಕ್ಷಕ್ಕೂ ಹೆಚ್ಚು ಮೊತ್ತದ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಆಸರೆಯಾಗಿದ್ದಾರೆ. ಇಂತಹ ಭಕ್ತರು ಕೊಡುವ ದಾನದಿಂದಲೇ ಶ್ರೀಮಠವು ಬಡವ ಮತ್ತು ಅನಾಥ ಮಕ್ಕಳಿಗೆ ಅಕ್ಷರ ಹಾಗೂ ಅನ್ನ ನೀಡುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದರು.

ಈ ವೇಳೆ ಸವಣೂರು ತಹಸೀಲ್ದಾರ್ ರವಿ ಕೊರವರ ಮಾತನಾಡಿ, ಮಕ್ಕಳ ಶಿಕ್ಷಣಕ್ಕಾಗಿ ನೀಡುವ ದಾನವು ಎಂದಿಗೂ ಫಲ ಕೊಟ್ಟೇ ಕೊಡುತ್ತದೆ. ದೇವರು ಇಂತಹ ದಾನಿಗಳಿಗೆ ಉತ್ತಮ ಆರೋಗ್ಯ ಮತ್ತು ಯಶಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.


ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಭಾಷ ಮಜ್ಜಗಿ, ಚಂದ್ರಕಾಂತ ಘಾಟಗೆ, ಸರೋಜಾ ಬನ್ನೂರ, ಆರ್.ಜಿ. ಚಿಕ್ಕಮಠ, ಯೋಗೇಂದ್ರ ಜಂಬಗಿ ಸೇರಿದಂತೆ ಅನೇಕರು ಮಾತನಾಡಿದರು.

ಸೋನಾಳ ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು. ಶಿಕ್ಷಕ ಶೆರಸೂರಿ ಕಾರ್ಯಕ್ರಮ ನಿರ್ವಹಿಸಿದರು. ಆರ್.ವಿ. ಬಡಿಗೇರ ಸ್ವಾಗತಿಸಿದರು. ಈ ವೇಳೆ ದಾನಿಗಳು ನೀಡಿದ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ಹಸ್ತಾಂತರಿಸಿದರು.