ಜಿಲ್ಲೆಯಾದ್ಯಂತ ಸಂಭ್ರಮದಿಂದ ಬಕ್ರೀದ್ ಆಚರಣೆ

KannadaprabhaNewsNetwork |  
Published : Jun 08, 2025, 01:37 AM IST
7ಕೆಆರ್ ಎಂಎನ್ 2.ಜೆಪಿಜಿರಾಮನಗರದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಈದ್ ಉಲ್ ಅಜ್ಹಾ (ಬಕ್ರೀದ್ )ಹಬ್ಬವನ್ನು ಮುಸ್ಲಿಂ ಬಾಂಧವರು ಶನಿವಾರ ಆಚರಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಈದ್ ಉಲ್ ಅಜ್ಹಾ (ಬಕ್ರೀದ್ )ಹಬ್ಬವನ್ನು ಮುಸ್ಲಿಂ ಬಾಂಧವರು ಶನಿವಾರ ಆಚರಿಸಿದರು.ಜಿಲ್ಲೆಯ ಹಲವೆಡೆ ಬೆಳಗ್ಗೆಯೇ ಕೆಲ ಮುಸ್ಲಿಂರು ಮಸೀದಿಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ನಗರ ಮತ್ತು ಪಟ್ಟಣಗಳಲ್ಲಿ ಈದ್ಗಾ ಮೈದಾನಗಳಿಗೆ ಮೆರವಣಿಗೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ಜಿಲ್ಲಾ ಕೇಂದ್ರವಾದ ರಾಮನಗರದ ಈದ್ಗಾ ಮೈದಾನದಲ್ಲಿ ಸೇರಿದ ಸಹಸ್ರಾರು ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ಜಮೀಯ ಮಸೀದಿಯ ಇಮಾಮ್ ಅಜ್ಗರ್ ಅಲಿರವರು ಈದ್ ನಮಾಜ್ ಅನ್ನು ಬೋಧಿಸಿದರು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ನಗರದ ವಿವಿಧ ಬಡಾವಣೆಗಳಿಂದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ಹಳೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು. ಸಾಮೂಹಿಕ ಪ್ರಾರ್ಥನೆ ನಂತರ ಮುಸ್ಲಿಂರು ಪರಸ್ಪರ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಬೇರೆ ಧರ್ಮದವರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ತಮ್ಮ ಸಂತಸ ಅಭಿಮಾನಗಳನ್ನು ವ್ಯಕ್ತಪಡಿಸಿದರು.ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎ.ಇಕ್ಬಾಲ್ ಹುಸೇನ್ ರವರು, ತ್ಯಾಗ ಬಲಿದಾನದ ಸಂಕೇತವಾಗಿ ವಿಶ್ವದ ಮುಸಲ್ಮಾನರೆಲ್ಲರು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಾರೆ. ನಮ್ಮ ಬದುಕಿನ ಎಲ್ಲ ಘಟ್ಟದಲ್ಲಿಯೂ ಮಾದರಿಯಾಗಿ ತ್ಯಾಗಕ್ಕೆ ಸಿದ್ದರಾಗಬೇಕೆಂಬ ಮತ್ತು ಸಮಾನತೆಯ ಸಂದೇಶವನ್ನು ಈ ಹಬ್ಬ ಸಾರುತ್ತದ ಎಂದು ಹೇಳಿದರು.....................................

ಬಾಕ್ಸ್‌ಪರಸ್ಪರ ಶುಭಾಷಯ ವಿನಿಮಯ

ಮಾಗಡಿ: ಪಟ್ಟಣದ ಹೊಸಪೇಟೆ, ಹೊಂಬಾಳಮ್ಮನಪೇಟೆ, ಹಳೆಮಸೀದಿ ಮತ್ತು ಹೊಸ ಮಸೀದಿ ಮೊಹಲ್ಲಾಗಳಿಂದ ಮೆರವಣಿಗೆಯಲ್ಲಿ ಕಲ್ಯಾ ಬಾಗಿಲಿಗೆ ತೆರಳಿ, ಬಿ.ಕೆ.ರಸ್ತೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಪುಟಾಣಿಗಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.ಪಟ್ಟಣದ ಹಳೆ ಮತ್ತು ಹೊಸ ಮಸೀದಿಯಲ್ಲಿ ಸೌಹಾರ್ದದ ಭೋಜನ ಕೂಟಗಳು ನಡೆದವು. ಜಮಾಲ್ ಸಾಬ್ ಪಾಳ್ಯ, ಅಗಲಕೋಟೆ, ಮತ್ತಿಕೆರೆ, ಹೊಸಪಾಳ್ಯ, ತಿಪ್ಪಸಂದ್ರ, ಹಳೆಲಾಯ, ಹೊಸಲಾಯ, ಹುಳ್ಳೇನ ಹಳ್ಳಿ, ಮಾಯಸಂದ್ರ, ಕುದೂರು, ಗೊಲ್ಲರ ಪಾಳ್ಯ, ಸಂಕೀಘಟ್ಟ,ಬಿಸ್ಕೂರು, ತೊರೆರಾಮನ ಹಳ್ಳಿ, ಸೋಲೂರು, ಗುಡೇಮಾರನ ಹಳ್ಳಿ, ಮಟ್ಟನ ದೊಡ್ಡಿ, ಮಾರೇಗೌಡನ ದೊಡ್ಡಿ, ಮಾಡಬಾಳ್ ಇತರೆಡೆಗಳಲ್ಲಿ ನೆಲೆಸಿರುವ ಮುಸ್ಲಿಮರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಆಚರಿಸಿದರು...........................

ಬಾಕ್ಸ್‌

ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಚನ್ನಪಟ್ಟಣ: ಪಟ್ಟಣದ ಕೋಟೆ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದರು.

ಬೆಳಿಗ್ಗೆಯಿಂದಲೇ ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಬಂದ ಮುಸ್ಲಿಂ ಸಮುದಾಯದವರು ಧರ್ಮಗುರುಗಳ ಉಪದೇಶದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಉಪನ್ಯಾಸ ನೀಡಿದರು. ಪ್ರಾರ್ಥನೆ ನಂತರ ಮುಸ್ಲಿಂರು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.ತಾಲೂಕಿನ ಹೊಂಗನೂರು, ಕೋಡಂಬಹಳ್ಳಿ, ಮಹಮದ್‌ಖಾನ್ ದೊಡ್ಡಿಗಳಲ್ಲೂ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು...........................

ಬಾಕ್ಸ್‌

ಶ್ರದ್ಧಾ ಭಕ್ತಿಯಿಂದ ಆಚರಣೆ

ಕನಕಪುರ: ಪವಿತ್ರ ಬಕ್ರೀದ್ ಹಬ್ಬವನ್ನು ಕನಕಪುರದಲ್ಲಿ ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಕನಕಪುರದ ನಾನಾ ಭಾಗಗಳಲ್ಲಿನ ಮಸೀದಿಗಳಿಂದ ಮೆರವಣಿಗೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದರು.

ಇಲ್ಲಿನ ನಮಾಜಿ ಬೋರೆಯ ಈದ್ಗಾ ಪ್ರದೇಶದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಪ್ರಧಾನ ಇಮಾಂ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಕೋರಿದರು.7ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''