ದಾಬಸ್‍ಪೇಟೆ: ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ದೇಶ- ವಿದೇಶಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಮನ್ನಣೆ ಪಡೆಯಲು ಬಾಲಗಂಗಾಧರನಾಥ ಸ್ವಾಮೀಜಿ ನೀಡಿದ ಕೊಡುಗೆ ಅನನ್ಯ. ಬದುಕಿನ ಕಾವಲುದಾರಿಯ ನಡುವೆ ದಿಟ್ಟ ಹೆಜ್ಜೆ ಇಟ್ಟ ಅವರ ಧೀರ ನಡಿಗೆ ಸರ್ವರಿಗೂ ಮಾದರಿ ಎಂದು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ತಿಳಿಸಿದರು.
ಪೂಜ್ಯರ ಜೀವನ ಯಾತ್ರೆ ಒಂದು ಪವಿತ್ರವಾದ ಯಜ್ಞ. ಪೂಜ್ಯರನ್ನು ಗ್ರಂಥಗಳ ಮೂಲಕ ವರ್ಣನೆ ಮಾಡಲು ಸಾಧ್ಯವಿಲ್ಲ. ಕಾರಣ ಅವರೊಬ್ಬ ದೇಶ ಕಂಡ ಗಿರಿತುಂಗ ಭಾಸ್ಕರರಾಗಿದ್ದು, ಅವರ ಮಹೋನ್ನತ ಹೆಜ್ಜೆ ಗುರುತು ನಮ್ಮೊಳಗೆ ಅಂತರ್ಗತವಾಗಬೇಕು ಎಂದರು.
ಸೋಂಪುರ ವಿಎಸ್‍ಎಸ್‍ಎನ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿಯು ದೇಶದ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಸ್ವಾಮೀಜಿಗಳು ಮೂರೂವರೆ ದಶಕಗಳ ಕಾಲ ಮಠವನ್ನು ಮುನ್ನಡೆಸಿ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಂದಿಗೂ ಅನೇಕ ಕುಟುಂಬಗಳಿಗೆ ಜೀವನಾಧಾರವಾಗಿ ನಿಂತಿದ್ದಾರೆ. ಇಂಥ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.ಕರವೇ ಅಧ್ಯಕ್ಷ ವೀರಸಾಗರ ಮಂಜುನಾಥ್ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜು, ಗ್ರಾಪಂ ಉಪಾಧ್ಯಕ್ಷ ಬೈರೇಶ್, ಮಾಜಿ ಸದಸ್ಯ ದೇವರಾಜು, ಕರವೇ ಅಧ್ಯಕ್ಷ ವೀರಸಾಗರ ಮಂಜುನಾಥ್, ಸೋಂಪುರ ವಿಎಸ್‍ಎಸ್‍ಎನ್ ನಿರ್ದೇಶಕರಾದ ಶಶಿಧರ್, ಮಂಜುನಾಥ್, ಗಂಗರುದ್ರಯ್ಯ, ಕೃಷ್ಣಮೂರ್ತಿ, ಮುಖಂಡರಾದ ನಿಡವಂದ ಪರಮೇಶ್, ಎಂ.ಡಿ.ಗೌಡ, ರಾಘು, ಬಾಳೆಕಾಯಿ ರಾಮು, ನಳಿನಾ, ಕುಮಾರಸ್ವಾಮಿ, ಸಿದ್ದರಾಜು, ರವಿಕುಮಾರ್, ಉಮೇಶ್, ಜೀವನ್ ತೀರ್ಥ ಪ್ರಸಾದ್ ಮತ್ತಿತರಿದ್ದರು.---------ದಾಬಸ್‍ಪೇಟೆ ಪಟ್ಟಣದ ಶಿವಗಂಗಾ ವೃತ್ತದಲ್ಲಿ ಲಿಂ.ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುಣ್ಯಸ್ಮರಣೆ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು.