ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಮಾಡಳು ಗ್ರಾಮದ ಮೂಲ ಸ್ವರ್ಣಗೌರಿ ಅಮ್ಮನ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಮಿಯ ಮೇಲೆ ಅಧರ್ಮ ಹೆಚ್ಚಾದಾಗಲೆಲ್ಲಾ ಭಗವಂತನು ದಶಾವತಾರಗಳ ಮೂಲಕ ಧರೆಯನ್ನು ರಕ್ಷಿಸಿದ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ದೊರಕುತ್ತವೆ. ಇಂದಿನ ಕಲಿಯುಗದಲ್ಲಿ ಮಾನವನೇ ತನ್ನ ಬುದ್ಧಿ ಮತ್ತು ವಿಜ್ಞಾನವನ್ನು ದುರುಪಯೋಗಪಡಿಸಿಕೊಂಡು ಕ್ಷಣಮಾತ್ರದಲ್ಲಿ ಲಕ್ಷಾಂತರ ಜನರನ್ನು ಸಂಹರಿಸುವ ಅಣುಬಾಂಬ್‌ಗಳಂತಹ ವಿನಾಶಕಾರಿ ಆಯುಧಗಳನ್ನು ಸೃಷ್ಟಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.ಮಾನವಕುಲ ಈ ಆತ್ಮಘಾತಕ ದಾರಿಗೆ ಒಳಗಾಗದೆ ಉಳಿಯಬೇಕಾದರೆ, ಮಹಾತಪಸ್ವಿಗಳಾದ ಕೋಡಿಮಠದ ಶ್ರೀಗಳಂತಹ ಸಂತರ ಹಿತವಚನಗಳನ್ನು ಅನುಸರಿಸಿ ಧರ್ಮಮಾರ್ಗದಲ್ಲಿ ಬದುಕು ಸಾಗಿಸಬೇಕಿದೆ. ಇಲ್ಲದಿದ್ದರೆ ಮನುಕುಲದ ಅವನತಿಗೆ ಮನುಷ್ಯನೇ ಕಾರಣನಾಗುತ್ತಾನೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮೂಲ ಸ್ವರ್ಣಗೌರಿ ಅಮ್ಮನವರ ದೇವಾಲಯದ ದ್ವಾರಬಾಗಿಲು ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ ನೀಡಿರುವುದನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿಯೂ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗನಿಷ್ಠೆ ಹಾಗೂ ತಪಸ್ಸಿನಿಂದ ಜೀವನವನ್ನು ಪಾವನಗೊಳಿಸಿಕೊಂಡಿದ್ದ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಗಳು ಈ ಭಾಗದ ಭಕ್ತರಿಗೆ ದಾರಿದೀಪವಾಗಿದ್ದರು. ದೈಹಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರ ಮಹಿಮೆ ಮತ್ತು ಕೃಪೆ ಇಂದಿಗೂ ಭಕ್ತರನ್ನು ಉದ್ಧರಿಸುತ್ತಿದೆ ಎಂದು ಹೇಳಿದರು.ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಮಾತನಾಡಿ, ಹಾರನಹಳ್ಳಿ ಕೋಡಿಮಠವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲದೆ, ನಂಬಿಕೆಯಿಂದ ಬರುವ ಎಲ್ಲ ಭಕ್ತರಿಗೂ ವರ ನೀಡುವ ಶಕ್ತಿಪೀಠವಾಗಿದೆ. ಶಿವಲಿಂಗಜ್ಜಯ್ಯ, ನೀಲಮ್ಮಜ್ಜಯ್ಯ ಹಾಗೂ ಲಿಂಗೈಕ್ಯ ನೀಲಲೋಚನ ಸ್ವಾಮಿಗಳಂತಹ ಮಹಾತಪಸ್ವಿಗಳು ನಡೆದಾಡಿದ ಈ ಪುಣ್ಯಭೂಮಿಯಲ್ಲಿ, ಪ್ರಸ್ತುತ ಜಗದ್ಗುರುಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ನುಡಿನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಹಾನಗಲ್ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಹಿರೇಮಠದ ಮೃತ್ಯುಂಜಯ ಸ್ವಾಮೀಜಿ, ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕಡೂರು ಮೂರುಕಳಸ ಮಠದ ಜ್ಞಾನಪ್ರಭು ದೇಶಿಕೇಂದ್ರ ಸ್ವಾಮೀಜಿ, ಕೊಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ವೇಳೆ ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಶಿಧರ್, ವೈದ್ಯ ಡಾ. ಶಿವಕುಮಾರ್, ಕೋಡಿಮಠದ ಏಜೆಂಟ್ ಮಹದೇವಪ್ಪ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಮುಖಂಡ ಮಾಡಳು ಶಿವಲಿಂಗಪ್ಪ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.