ಹಾನಗಲ್ಲ ತಾಲೂಕಿನ ರೈತರ ಕೃಷಿ ಬದುಕಿನ ಭರವಸೆಯ 200 ಕೆರೆ ತುಂಬಿಸುವ "ಬಾಳಂಬೀಡ ಏತ ನೀರಾವರಿ ಯೋಜನೆ " ವರದಾ ನದಿಯಲ್ಲಿ ನೀರು ಬಂದರೂ ಕೆರೆಗೆ ತುಂಬಿಸಲಾರದ ಸ್ಥಿತಿ ಎದುರಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮಾರುತಿ ಶಿಡ್ಲಾಪೂರ
ಹಾನಗಲ್ಲ: ತಾಲೂಕಿನ ರೈತರ ಕೃಷಿ ಬದುಕಿನ ಭರವಸೆಯ 200 ಕೆರೆ ತುಂಬಿಸುವ "ಬಾಳಂಬೀಡ ಏತ ನೀರಾವರಿ ಯೋಜನೆ " ವರದಾ ನದಿಯಲ್ಲಿ ನೀರು ಬಂದರೂ ಕೆರೆಗೆ ತುಂಬಿಸಲಾರದ ಸ್ಥಿತಿ ಎದುರಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಕಳೆದ 15 ದಿನಗಳಿಂದ ಮಳೆ ಆರಂಭವಾಗಿ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದರೂ ಕೂಡ ತಾಲೂಕಿನ 200ಕ್ಕೂ ಅಧಿಕ ಕೆರೆ ತುಂಬಿಸುವ ಈ ಯೋಜನೆಗೆ ಆರಂಭದಲ್ಲೇ ವಿಘ್ನ ಕಾಡಿದೆ. ರೈತರ ನಿರೀಕ್ಷೆ ಸುಳ್ಳಾಗಿದೆ.
ಹಾನಗಲ್ಲ ತಾಲೂಕಿನಲ್ಲಿ ಈ ವರೆಗೂ ಕೆರೆ-ಕಟ್ಟೆಗಳಿಗೆ ನೀರು ಬರುವಂಥ ಮಳೆ ಬಿದ್ದಿಲ್ಲ. ಆದರೆ ವರದಾ ನದಿಗೆ ಶಿವಮೊಗ್ಗ ಹಾಗೂ ಶಿರಸಿ ಭಾಗದಲ್ಲಿ ಬಿದ್ದ ಮಳೆಯ ನೀರು ಬಾಳಂಬೀಡ ಏತ ನೀರಾವರಿ ಯೋಜನೆ ಕಾರ್ಯಾರಂಭ ಮಾಡಲು ಅನುಕೂಲಕರವಾಗಿತ್ತು.
ತಿಂಗಳ ಹಿಂದೆಯೇ ಸಭೆಯಲ್ಲಿ ಈ ಯೋಜನೆ ಕಾರ್ಯಾರಂಭಕ್ಕೆ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದಾಗಲೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ನದಿಗೆ ಬಂದ ನೀರು ಕೆರೆಗಳಿಗೆ ಬಾರದಂತಾಗಿದೆ. ಮೂರು ದಿನಗಳ ಹಿಂದೆ ಇದನ್ನು ಕಾರ್ಯಾರಂಭಿಸಲು ಹೊರಟಾಗ ವಿದ್ಯುತ್ ಸಮಸ್ಯೆಯಾಗಿ ನೀರು ಹರಿಸುವುದು ಸಾಧ್ಯವಾಗಿಲ್ಲ. ಈಗ ಸಮಸ್ಯೆಯ ಮೂಲವನ್ನು ಹುಡುಕುವ ಪ್ರಯತ್ನ ಆರಂಭವಾಗಿದ್ದು, ಸದ್ಯಕ್ಕೆ ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.
ಈ ನಡುವೆ ಸೋಮವಾರ ಶಾಸಕ ಶ್ರೀನಿವಾಸ ಮಾನೆ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಕೂಡಲೇ ಪರಿಹರಿಸಿ ಕೆರೆಗಳಿಗೆ ನೀರು ತುಂಬಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಕಳೆದ ವರ್ಷವೂ ಮಳೆಗಿಂತ ಈ ಯೋಜನೆಯಿಂದ ನೀರು ಹರಿಸಿದ್ದರಿಂದಲೇ 200ಕ್ಕೂ ಅಧಿಕ ಕೆರೆಗಳು ತುಂಬಿದ್ದವು. ಹೀಗಾಗಿ ಕಳೆದ ಬೇಸಿಗೆಯಲ್ಲಿ ಅಂತರ್ಜಲ ಸುಧಾರಿಸಿದ್ದರಿಂದ ಕೊಳವೆ ಬಾವಿಗಳಲ್ಲಿ ಉತ್ತಮ ನೀರು ಪೂರೈಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಡಕೆ, ಶುಂಠಿ, ಬಾಳೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ಹಾಗೂ ಗೋವಿನಜೋಳ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ.
ವಿದ್ಯುತ್ ವ್ಯತ್ಯಯದಿಂದ ನೀರು ಹರಿಸುವಿಕೆಗೆ ಅನಾನುಕೂಲವಾಗಿದೆ ಎಂದು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅಲ್ಲದೇ ವಿದ್ಯುತ್ ಸಮಸ್ಯೆಯನ್ನು ಹುಡುಕಿ ಸರಿಪಡಿಸಲು ವಿದ್ಯುತ್ ಇಲಾಖೆಯ ಸಿಬ್ಬಂದಿಯ ಕೊರತೆಯೂ ಕಾರಣ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಮುಂಜಾಗೃತೆ ಕ್ರಮ ಕೈಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿದ್ದೇವೆ: ಮೂರು ದಿನಗಳ ಹಿಂದೆ ಬಾಳಂಬೀಡ ಏತ ನೀರಾವರಿ ಯೋಜನೆ ನೀರು ಹರಿಸಲು ಆರಂಭಿಸುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಇರುವುದು ಕಂಡುಬಂದಿತು. ತಾಂತ್ರಿಕ ಅಡಚಣೆ ಎದುರಾಗಿದೆ. ಸಿಬ್ಬಂದಿ ಕೊರತೆಯಿಂದ ಇದನ್ನು ಸರಿಪಡಿಸಲು ವಿಳಂಬವಾಗಿದೆ. ನಾವೂ ವಿದ್ಯುತ್ ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹಾನಗಲ್ಲ ಬೃಹತ್ ನೀರಾವರಿ ಇಲಾಖೆ ಎಇಇ ಗಿರೀಶ್ ಹೇಳಿದರು.
ರೈತರಿಗೆ ಅನ್ಯಾಯ: ನೀರಾವರಿ ಯೋಜನೆಗಳನ್ನು ಸಕಾಲಿಕವಾಗಿ ರೈತರಿಗೆ ಸದುಪಯೋಗ ಮಾಡಿಕೊಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಾವರಿ ಯೋಜನೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಅಗತ್ಯವಿದ್ದಲ್ಲಿ ಅನುದಾನ ಪಡೆದು ಕೆರೆ ತುಂಬಿಸುವ ಯೋಜನೆಯನ್ನು ಸಕಾಲಿಕವಾಗಿ ಆರಂಭಿಸಲು ಸೂಚಿಸಿದ್ದಾರೆ. ಆದರೂ ವರದಾ ನದಿಯಲ್ಲಿ ನೀರು ಬಂದಾಗ ಯೋಜನೆ ಸ್ಥಗಿತವಾಗಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ರೈತ ಸಂಘದ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಹಾನಗಲ್ಲ ತಾಲೂಕಿನ ರೈತರ ಜೀವನಾಡಿಯಾದ ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರು ಹರಿದು ಪೋಲಾಗುತ್ತಿದ್ದು, ರೈತರ ಕೆರೆಗಳಿಗೆ ನೀರು ಬರದಂತಾಗಿದೆ. ಇದಕ್ಕೆ ರೈತ ಸಂಘದ ಪ್ರತಿಭಟನೆಯಿದೆ ಎಂದು ಹಾನಗಲ್ಲ ರೈತಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.