ಯಲ್ಲಾಪುರ: ನಮ್ಮ ನಿತ್ಯ ಜೀವನದಲ್ಲಿ ಆರೋಗ್ಯಕ್ಕೆ ಆಹಾರ, ಧ್ಯಾನ, ಜೀವನಶೈಲಿ ಪ್ರಧಾನವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಕೆಲವು ಹಂತಗಳಲ್ಲಿ ಆರೋಗ್ಯದಲ್ಲಿ ಏರುಪೇರು ಸಹಜ ಪ್ರಕ್ರಿಯೆ. ಸದಾ ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಭೈರುಂಬೆಯ ಆಯುಷ್ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಹೇಳಿದರು.
ಡಾ.ಪೂರ್ಣಿಮಾ ಆರೋಗ್ಯದ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದರು.
ಉಮ್ಮಚಗಿ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ, ವಿದುಷಿ ಶರಾವತಿ ಗಜಾನನ ಭಟ್ಟ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ತಾಯಿಯಾದವಳು ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಹೇಗಿರಬೇಕು ಎಂಬುದನ್ನು ಅನೇಕ ಕಥೆಗಳು ಹಾಗೂ ದೃಷ್ಟಾಂತಗಳ ಮೂಲಕ ಮನ ಮುಟ್ಟುವಂತೆ ತಿಳಿಸಿದರು.ಗ್ರಾಮೀಣ ವಯೋವೃದ್ಧ ಮಹಿಳೆಯರಾದ ಭಾಗೀರಥಿ ಗಜಾನನ ಹೆಗಡೆ ಜಾಲಿಮನೆ, ಚಂದು ಸುಬ್ಬಾ ದೇವಾಡಿಗ ದನಬೈಲ್, ಅಬ್ಬಕ್ಕ ಗೋವಿಂದ ಉಪ್ಪಾರ್ ಕೆಳಗಿನಕೇರಿ, ಚಿಕ್ಕಮ್ಮ ಗೋವಿಂದ ಪೂಜಾರಿ ಇವರ ಕೌಟುಂಬಿಕ ವ್ಯವಸ್ಥೆಯಲ್ಲಿ ಅವರ ಪಾತ್ರ ಹಾಗೂ ಸಾಧನೆಯನ್ನು ಗುರುತಿಸಿ, ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯೆ ನಿರ್ಮಲಾ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕಿ ನೀತಾ ಹಬ್ಬು ಅಧ್ಯಕ್ಷತೆ ವಹಿಸಿದ್ದರು. ಮಳಲಗಾಂವ ಕ್ಲಸ್ಟರಿನ ಸಿಆರ್.ಪಿ ದೀಪಾ ಶೇಟ್, ಎಸ್.ಡಿಎಂಸಿ ಉಪಾಧ್ಯಕ್ಷೆ ಮಮತಾ ದೇವಾಡಿಗ, ಗೀತಾ ಜ್ಞಾನವಿದ್ಯಾ ಸಮಿತಿಯ ಸಂಚಾಲಕಿ ಭಾಗೀರಥಿ ಹೆಗಡೆ, ಗ್ರಂಥಪಾಲಕಿ ಶೈಲಾ ಭಂಡಾರಿ, ಎಲ್ಲ ಪಾಲಕಿಯರು ಉಪಸ್ಥಿತರಿದ್ದರು.