ಕೊಪ್ಪಳ: ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ಮಾಡದಂತೆ ಹೋರಾಟ ತೀವ್ರಗೊಂಡ ಬೆನ್ನಲ್ಲೇ ತಾಲೂಕಿನ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಬಲ್ಡೋಟಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಾಧ್ಯಕ್ಷ ರಮೇಶ ಅವರು ಘೋಷಣೆ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಜನರನ್ನು ಸೆಳೆಯಲು ಬಲ್ಡೋಟಾ ಕಂಪನಿ ಮುಂದಾಗಿದೆಯೇ ಎನ್ನುವ ಮಾತು ಕೇಳಿ ಬರಲಾರಂಭಿಸಿದೆ.
ಬಲ್ಡೋಟಾ ಕಾರ್ಖಾನೆ ಸ್ಥಾಪನೆಯಿಂದ ಪರಿಸರ ಹಾನಿಯಾಗುವುದಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತದೆ. ತ್ಯಾಜ್ಯವನ್ನು ಸಹ ಸದ್ಬಳಕೆ ಮಾಡುವುದರಿಂದ ಇಲ್ಲಿ ತ್ಯಾಜ್ಯದ ಪ್ರಶ್ನೆಯೇ ಬರುವುದಿಲ್ಲ ಎಂದು ರಮೇಶ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ನಾವು ಈಗಾಗಲೇ ಬಡ್ಡಿರಹಿತ ಸಾಲವನ್ನು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ನೀಡುತ್ತಿದ್ದೇವೆ. ಇದನ್ನು ಕೊಪ್ಪಳ ತಾಲೂಕಿನ ಹಾಲವರ್ತಿ ಮತ್ತು ಹಿರೇಬಗನಾಳ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ. ಕೊಪ್ಪಳ ತಾಲೂಕಿನಾದ್ಯಂತ ವಿಸ್ತರಣೆ ಮಾಡಲಾಗುವುದು. ಸ್ಲಂ ಪ್ರದೇಶಗಳಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಈ ಬಡ್ಡಿರಹಿತ ಸಾಲ ನೀಡುವುದಾಗಿ ಹೇಳಿದ್ದಾರೆ.
ಈ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಅವರು, ಹೌದು, ಘೋಷಣೆ ಮಾಡಿದ್ದು ನಿಜ. ಈಗಾಗಲೇ ನಾವು 180 ಸ್ವಸಹಾಯ ಸಂಘಗಳಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನೀಡುತ್ತಿದ್ದೇವೆ. ಕೊಪ್ಪಳ ತಾಲೂಕಿನ ನಾಲ್ಕಾರು ಹಳ್ಳಿಗಳಲ್ಲಿ ನೀಡುತ್ತಿದ್ದೇವೆ. ಇದನ್ನೇ ಈಗ ಕೊಪ್ಪಳ ತಾಲೂಕಿನಾದ್ಯಂತ ವಿಸ್ತರಣೆ ಮಾಡಲಾಗುವುದು, ಸ್ಲಂ ಏರಿಯಾಗಳಿಗೆ ಆದ್ಯತೆ ನೀಡಿ, ಬಡ್ಡಿರಹಿತ ಸಾಲವನ್ನು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ನೀಡಲಾಗುವುದು ಎಂದರು.ಸಾಲದ ಮಿತಿ ಆಯಾ ಸಂಘದ ಸಾಮರ್ಥ್ಯ ಮತ್ತು ಮಹಿಳೆಯರ ಹಣ ಬಳಕೆಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಇದುವರೆಗೂ ಗರಿಷ್ಠ ಒಂದೂವರೆ ಲಕ್ಷ ರುಪಾಯಿ ಬಡ್ಡಿ ರಹಿತ ಸಾಲ ನೀಡಿದ್ದೇವೆ ಎಂದರು.
ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ ಅವರು ಇದೆಲ್ಲವೂ ಹೋರಾಟ ಹತ್ತಿಕ್ಕುವ ಷಡ್ಯಂತ್ರವಾಗಿದೆ ಎಂದು ಅವರ ವಿರುದ್ಧ ಕಿಡಿಕಾರಿದ್ದಾರೆ.