ಇಲ್ಲಿನ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಬಾಳೆಕುದ್ರು ಮಠ ಶ್ರೀಗಳು ಪರಾರಿಯಾಗಿದ್ದಾರೆ ಮತ್ತು ಮಠದ 6 ಪ್ರಾಚೀನ ವಿಗ್ರಹಗಳು ಕಾಣೆಯಾಗಿದ್ದು, ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳನ್ನು ಶ್ರೀಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ಮಧ್ಯಸ್ಥ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಉಡುಪಿ: ಇಲ್ಲಿನ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಬಾಳೆಕುದ್ರು ಮಠ ಶ್ರೀಗಳು ಪರಾರಿಯಾಗಿದ್ದಾರೆ ಮತ್ತು ಮಠದ 6 ಪ್ರಾಚೀನ ವಿಗ್ರಹಗಳು ಕಾಣೆಯಾಗಿದ್ದು, ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳನ್ನು ಶ್ರೀಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ಮಧ್ಯಸ್ಥ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಶ್ರೀಗಳು ಕಾನೂನು ಪ್ರಕ್ರಿಯೆ ನಡೆಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಎಲ್ಲಾ ವಿಗ್ರಹಗಳು ಬಳಿ ಭದ್ರವಾಗಿವೆ ಎಂದವರು ಹೇಳಿದ್ದಾರೆ. ಮಠದ ಹಳೆಯ ಭಕ್ತರೊಬ್ಬರು ಬೆಂಗಳೂರಿನ ಬಸವೇಶ್ವರನಗರ ಠಾಣೆಗೆ ಮಠದ ಶ್ರೀ ವಾಸುದೇವ ಸದಾಶಿವಾಶ್ರಮ, ಆಡಳಿತಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿ ಜಯಲಕ್ಷ್ಮೀ ಮತ್ತು ಪುರೋಹಿತ ಶ್ರೇಯಸ್ ಅವರು ಹಳೆಯ ವಿಗ್ರಹಗಳನ್ನು ಕಳ್ಳತನ ಮಾಡಿ ಬೆಂಗಳೂರಿನ ಪ್ರಸಿದ್ಧ ಐಡಲ್ಸ್ ಎಂಬ ಸಂಸ್ಥೆಗೆ ಮಾರಲಾಗಿದೆ ಎಂದು ಮೇಲೆ ದೂರು ನೀಡಲಾಗಿದ್ದು, ಎಫ್ಐಆರ್ ಆಗಿದೆ. ಆದರೆ ಈ ಆರೋಪ ಹಸಿ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿದೆ ಎಂದವರು ಹೇಳಿದ್ದಾರೆ. ಈ ದೂರಿನಂತೆ ಎಫ್ಐಆರ್ ಆಗಿರುವುದರಿಂದ ಶ್ರೀಗಳು ಕಾನೂನು ಪ್ರಕ್ರಿಯೆಗೆ ಬೆಂಗಳೂರಿಗೆ ಬಂದಿದ್ದಾರೆ, ಮಠ ಬಿಟ್ಟು ಓಡಿ ಹೋಗಿದ್ದಾರೆ, ಮಠಕ್ಕೆ ಬೀಗ ಹಾಕಿದ್ದಾರೆ ಎಂಬುದು ಹಸಿ ಸುಳ್ಳು ಆರೋಪ ಎಂದವರು ಹೇಳಿದ್ದಾರೆ. ಮಠದ ಪೂಜೆಗೆ ಚ್ಯುತಿ ಬಾರದಂತೆ ಅಲ್ಲಿ ಒಬ್ಬ ಪುರೋಹಿತರನ್ನು ನೇಮಿಸಲಾಗಿದೆ, ಪೂಜಾ ಕೈಂಕರ್ಯಗಳು ನಿರಂತರ ನಡೆಯುತ್ತಿವೆ, ಶ್ರೀಗಳು ಕಾನೂನು ತಜ್ಞರ ಭೇಟಿಗೆ ಬಂದಿದ್ದಾರೆ, ಮುಂದೆ ಕಾನೂನು ಪ್ರಕ್ರಿಯೆಗಳು ನಡೆಯಲಿರುವುದರಿಂದ ನಾವು ಎಲ್ಲರೂ ಬಂದಿದ್ದೇವೆ, ನಾವು ಯಾವುದೇ ಅನಾಚಾರ ಅಪಚಾರ ನಡೆಸಿಲ್ಲ.
ವಿಗ್ರಹಗಳು ಶ್ರೀಗಳ ಬಳಿ ಭದ್ರವಾಗಿವೆ, ಕಾನೂನು ಪ್ರಕ್ರಿಯೆಗಳು ಮುಗಿದ ಕೂಡಲೇ ಭಕ್ತರ ಮುಂದೆ ಬಂದು ಸತ್ಯವನ್ನು ಹಂಚಿಕೊಳ್ಳುತ್ತೇವೆ, ಭಕ್ತರು ಊರವರು ಸಹನೆಯಿಂದ ಸಹಕರಿಸಬೇಕು ಎಂದವರು ಕೈಮುಗಿದು ಪ್ರಾರ್ಥಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.