ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಶ್ರೀ ಭಗವತಿ ದೇವಿ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ದೇವಿಯನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.ಬಲ್ಲಮಾವಟಿ, ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆ ನಿರ್ಮಿಸಲಾಗಿದೆ.
ಉತ್ಸವದ ಅಂಗವಾಗಿ ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳು ಜರುಗಿತು. ಮೂರು ಕೋಲಗಳನ್ನು ಭಕ್ತರು ವೀಕ್ಷಿಸಿ ಸಂಭ್ರಮಿಸಿದರು.ಗ್ರಾಮದ ರಾಟೆ ಭಗವತಿ ದೇವರ ಉತ್ಸವ ಗುರುವಾರ ಆರಂಭಗೊಂಡಿದ್ದು ಪೀಲಿಯಾಟ್ ಹಾಗೂ ಬೋಡ್ ನಮ್ಮೆ ನೆರವೇರಿದವು.
ಶುಕ್ರವಾರ ಬೆಳಗ್ಗೆ ಎಡಿಕೇರಿ ದೊಡ್ಡ ಮನೆಯಿಂದ ಭಂಡಾರ ತಂದು ದೇವಾಲಯದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಉತ್ಸವದ ಅಂಗವಾಗಿ ಆರಾಟ್ , ಬೊಳಕಾಟ್ ಮಹಾಪೂಜೆ, ಪ್ರಸಾದ ವಿತರಣೆಯ ನೆರವೇರಿದ ಬಳಿಕ ಮಧ್ಯಾಹ್ನ ದೇವರನ್ನು ರಾಟೆಯಲ್ಲಿ ಕೂರಿಸಿ ಸಾಂಪ್ರದಾಯಿಕವಾಗಿ ತೂಗಲಾಯಿತು. ಬಳಿಕ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ತೆರೆಗಳು ಸಾಂಪ್ರದಾಯಿಕ ಆಚರಣೆ ನಡೆದವು.ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಗೆ ವಿವಿಧ ಹರಕೆ , ಕಾಣಿಕೆ ಒಪ್ಪಿಸಿ ಶ್ರದ್ಧಾ ಭಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ಊರ ಮತ್ತು ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ನಡೆಯುವ ಉತ್ಸವ ಈ ವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ದು ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.