ಪಾದಯಾತ್ರೆಗಳ ರಾಜಕೀಯ ಪ್ರಯೋಗ ಶಾಲೆ ಬಳ್ಳಾರಿ!

KannadaprabhaNewsNetwork |  
Published : Sep 11, 2026, 02:15 AM IST
ಸಸಸಸ | Kannada Prabha

ಸಾರಾಂಶ

ಬಳ್ಳಾರಿ ಎಂದರೆ ಕೇವಲ ಗಣಿಗಾರಿಕೆಯ ಜಿಲ್ಲೆ ಎನ್ನುವ ಚಿತ್ರಣ ಮೀರಿಸಿ, ಕಳೆದ ಹಲವು ವರ್ಷಗಳಿಂದ ರಾಜ್ಯದ ಅಧಿಕಾರ ರಾಜಕಾರಣದ ಪ್ರಮುಖ ವೇದಿಕೆಯಾಗಿಯೂ ಗುರುತಿಸಿಕೊಂಡಿದೆ.

ಮಂಜುನಾಥ ಕೆ.ಎಂ. ಬಳ್ಳಾರಿ

ರಾಜಕೀಯದ ಕಾವು ಏರಿದಾಗಲೆಲ್ಲ ರಾಜ್ಯದ ಗಮನ ತನ್ನತ್ತ ಸೆಳೆಯುವ ಬಳ್ಳಾರಿ, ಇದೀಗ ಮತ್ತೊಮ್ಮೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ. ಗಣಿಗಾರಿಕೆಯ ಸದ್ದು, ಅಧಿಕಾರದ ಪೈಪೋಟಿ, ರಾಜಕೀಯ ಸಂಘರ್ಷ, ಆರೋಪ–ಪ್ರತ್ಯಾರೋಪಗಳ ನಡುವೆ ಪದೇಪದೇ ಸುದ್ದಿಯಾಗುತ್ತಿದ್ದ ಗಣಿನಾಡು, ಈ ಬಾರಿ ಬೃಹತ್ ರಾಜಕೀಯ ಪಾದಯಾತ್ರೆಯ ಹೆಜ್ಜೆ ಗುರುತುಗಳಿಂದ ರಾಜ್ಯದ ಗಮನ ಸೆಳೆದಿದೆ.

ಒಂದು ಕಾಲದಲ್ಲಿ ಗಣಿಗಾರಿಕೆ ವಿಚಾರದಿಂದ ರಾಜ್ಯ ರಾಜಕೀಯದ ಚರ್ಚೆಯ ಕೇಂದ್ರವಾಗಿದ್ದ ಬಳ್ಳಾರಿ, ಇದೀಗ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಹಿನ್ನೆಲೆ ನಡೆದ ಬಿಜೆಪಿ ಹೋರಾಟದ ಅಂತಿಮ ತಾಣವಾಗಿ ರಾಜಕೀಯ ಮಹತ್ವ ಪಡೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಸೆ. 1ರಂದು ಆರಂಭವಾದ ಬಳ್ಳಾರಿ ಚಲೋ ಪಾದಯಾತ್ರೆ, ಹತ್ತು ದಿನಗಳ ರಾಜಕೀಯ ಪಯಣದ ಬಳಿಕ ಬಳ್ಳಾರಿಯಲ್ಲಿ ಸಮಾರೋಪಗೊಂಡಿದ್ದು, ಬಿಜೆಪಿಯ ಸಂಘಟನಾ ಶಕ್ತಿ ಹಾಗೂ ಹೋರಾಟದ ಸಾಮರ್ಥ್ಯ ಪ್ರದರ್ಶಿಸಿದೆ.

ಮತ್ತೆ ಬಳ್ಳಾರಿಯತ್ತ: ಬಳ್ಳಾರಿ ಎಂದರೆ ಕೇವಲ ಗಣಿಗಾರಿಕೆಯ ಜಿಲ್ಲೆ ಎನ್ನುವ ಚಿತ್ರಣ ಮೀರಿಸಿ, ಕಳೆದ ಹಲವು ವರ್ಷಗಳಿಂದ ರಾಜ್ಯದ ಅಧಿಕಾರ ರಾಜಕಾರಣದ ಪ್ರಮುಖ ವೇದಿಕೆಯಾಗಿಯೂ ಗುರುತಿಸಿಕೊಂಡಿದೆ. ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳೊಂದಿಗೆ ಬಳ್ಳಾರಿಯ ಹೆಸರು ಯಾವುದಾದರೂ ಒಂದು ರೀತಿಯಲ್ಲಿ ತಳುಕು ಹಾಕಿಕೊಂಡೇ ಬಂದಿದೆ.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವೂ ಇದಕ್ಕೆ ಹೊರತಾಗಲಿಲ್ಲ. ಪ್ರಕರಣದ ಹಿನ್ನೆಲೆ ಬಿಜೆಪಿ ಆರಂಭಿಸಿದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಹೋರಾಟದ ರಾಜಕೀಯ ಪರಿಣಾಮವಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡರು. ಆದರೆ ಇದರಿಂದ ಬಿಜೆಪಿ ಹೋರಾಟಕ್ಕೆ ವಿರಾಮ ಬೀಳಲಿಲ್ಲ. ಸರ್ಕಾರದ ವಿರುದ್ಧದ ಹೋರಾಟ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾದಯಾತ್ರೆಯ ನಿರ್ಧಾರ ಕೈಗೊಂಡರು. ಲಿಂಗಸೂಗೂರಿನಿಂದ ಬಳ್ಳಾರಿವರೆಗೆ ಸಾಗಿದ ಈ ಪಾದಯಾತ್ರೆ, ದಾರಿಯುದ್ದಕ್ಕೂ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರನ್ನು ಒಗ್ಗೂಡಿಸುವ ರಾಜಕೀಯ ಪ್ರಯತ್ನವಾಗಿ ರೂಪುಗೊಂಡಿತು.

ರಾಜಕೀಯ ಪಾಠ: ಬಳ್ಳಾರಿ ನೆಲಕ್ಕೆ ಪಾದಯಾತ್ರೆಯ ರಾಜಕೀಯ ಹೊಸದಲ್ಲ. ಇದಕ್ಕೆ ಒಂದು ದಶಕಕ್ಕೂ ಹಿಂದಿನ ರಾಜಕೀಯ ಇತಿಹಾಸ ಸಾಕ್ಷಿಯಾಗಿದೆ. 2010ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಅಂದಿನ ಬಳ್ಳಾರಿ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಗಣಿಗಾರಿಕೆ, ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದ ಆರೋಪ ಮುಂದಿಟ್ಟುಕೊಂಡು ನಡೆದ ಆ ಪಾದಯಾತ್ರೆ ಸಿದ್ದರಾಮಯ್ಯ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು.

ಪಾದಯಾತ್ರೆ ಮೂಲಕ ರಾಜ್ಯಾದ್ಯಂತ ರಾಜಕೀಯ ಸಂದೇಶ ರವಾನಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದರು.

ಹೀಗಾಗಿ ಬಳ್ಳಾರಿ ನೆಲದಲ್ಲಿ ನಡೆದ ಆ ಪಾದಯಾತ್ರೆ ಇಂದಿಗೂ ರಾಜ್ಯ ರಾಜಕೀಯದಲ್ಲಿ ಒಂದು ಮಹತ್ವದ ರಾಜಕೀಯ ಪ್ರಯೋಗದ ಉದಾಹರಣೆಯಾಗಿ ಉಳಿದಿದೆ.

ಈಗ ವಿಜಯೇಂದ್ರರ ಸರದಿ?: ಸಿದ್ದರಾಮಯ್ಯ ಪಾದಯಾತ್ರೆ ಬಳ್ಳಾರಿಯಿಂದ ಆರಂಭಿಸಿ ರಾಜಕೀಯ ಭವಿಷ್ಯಕ್ಕೆ ಹೊಸ ಆಯಾಮ ನೀಡಿದ್ದರೆ ವಿಜಯೇಂದ್ರ ಬಳ್ಳಾರಿ ಚಲೋ ಅವರ ನಾಯಕತ್ವಕ್ಕೆ ಯಾವ ತಿರುವು ನೀಡಲಿದೆ? ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಪಾದಯಾತ್ರೆ ಯಶಸ್ವಿಯಾಗಿದೆ ಎಂಬುದು ಬಿಜೆಪಿ ನಾಯಕರ ಆತ್ಮವಿಶ್ವಾಸ ಹೆಚ್ಚಿಸಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಸಂಘಟನಾ ಸಾಮರ್ಥ್ಯ ತೋರಿಸಲು ಇದು ವೇದಿಕೆಯಾಗಿದೆ. ಪಕ್ಷದೊಳಗಿನ ವಿವಿಧ ಬಣಗಳನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನವೂ ಇಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ಪಾದಯಾತ್ರೆಯ ರಾಜಕೀಯ ಫಲಿತಾಂಶ ಕೇವಲ ಸರ್ಕಾರದ ವಿರುದ್ಧದ ಹೋರಾಟದ ಯಶಸ್ಸಿಗೆ ಸೀಮಿತವಾಗುವುದಿಲ್ಲ. ಇದು ವಿಜಯೇಂದ್ರ ನಾಯಕತ್ವದ ಸ್ವೀಕಾರಾರ್ಹತೆ, ಪಕ್ಷ ಒಗ್ಗೂಡಿಸುವ ಸಾಮರ್ಥ್ಯ ಮತ್ತು ಮುಂದಿನ ಚುನಾವಣಾ ರಾಜಕಾರಣದಲ್ಲಿ ಅವರ ಪಾತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ನಿಂದ ಹಾವೇರಿ ಜಿಲ್ಲೆ ಬರಗಾಲ ಘೋಷಣೆಗೆ ಒತ್ತಾಯಿಸಿ೨೧ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ, ಬೈಕ್ ರ‍್ಯಾಲಿ
ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆ ಸಹಭಾಗಿತ್ವ ಅತ್ಯುತ್ತಮ ಬೆಳವಣಿಗೆ