ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆಯ ಸ್ಥಾನ ಪ್ರಧಾನವಾಗಿ ಸಹಭಾಗಿತ್ವ ಪಡೆದು ಯಶಸ್ವಿಯಾಗುತ್ತಿರುವುದು ದೇಶದ ಹಿತದಲ್ಲಿ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.
ಹಾನಗಲ್ಲ: ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಯಲ್ಲಿ ಮಹಿಳೆಯ ಸ್ಥಾನ ಪ್ರಧಾನವಾಗಿ ಸಹಭಾಗಿತ್ವ ಪಡೆದು ಯಶಸ್ವಿಯಾಗುತ್ತಿರುವುದು ದೇಶದ ಹಿತದಲ್ಲಿ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.
ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಪರಿವರ್ತನ ಕಲಿಕಾ ಕೇಂದ್ರದ ಸಹಯೋಗದೊಂದಿಗೆ ನಡೆದ ಮೂರು ತಿಂಗಳ ಕಾಲ ಹಾನಗಲ್ಲ ಹಾಗೂ ಆರೆಗೊಪ್ಪ ಗ್ರಾಮಗಳ ಕಲಿಕಾ ಕೇಂದ್ರಗಳಲ್ಲಿ ತರಬೇತಿ ನಡೆದ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು., ಕುಟುಂಬದ ಸಾರಥ್ಯವಹಿಸುವಲ್ಲಿಯೂ ಈಗ ಮಹಿಳೆ ಪ್ರಧಾನವಾಗಿದ್ದಾರೆ. ತಾಯಿ ಕುಟುಂಬದ ಕಣ್ಣಾಗಿ ಇಡೀ ವ್ಯವಸ್ಥೆಯಲ್ಲಿ ತನ್ನನ್ನು ತಾನು ಸಮರ್ಥವಾಗಿ ತೊಡಗಿಸಿಕೊಂಡಿದ್ದಾಳೆ. ಕುಟುಂಬದ ಆರ್ಥಿಕ ಸಬಲತೆಯಲ್ಲಿಯೂ ಅವಳು ಗಟ್ಟಿಯಾಗಿ ಹೆಜ್ಜೆ ಹಾಕುತ್ತಿದ್ದಾಳೆ. ಈಗ ಮಹಿಳೆಯರು ಔದ್ಯೋಗಿಕ ಕ್ರಾಂತಿಯಲ್ಲಿ ಹೆಚ್ಚು ವೇಗದಲ್ಲಿ ಮುನ್ನಡೆಯುವ ಅಗತ್ಯವೂ ಇದೆ. ಔದ್ಯೋಗಿಕ ಶಿಕ್ಷಣವೂ ಈಗ ಅಗತ್ಯವಾಗಿದೆ. ಆರ್ಥಿಕ ಹಂತಕ್ಕೆ ಒಳ್ಳೆಯ ಯೋಜನೆಗಳು ಬಂದಾಗ ಅವುಗಳ ಸದುಯೋಗಕ್ಕೆ ಮುಂದಾಗಿ. ಈ ಸಂಸ್ಥೆಯ ಮೂಲಕ ಹೊಲಿಗೆ ತರಬೇತಿ ಪಡೆದವರಿಗೆ ತಮ್ಮ ವೈಯಕ್ತಿಕ ಆರ್ಥಿಕ ಸಹಕಾರದಲ್ಲಿ ೫೦-೫೦ ಆರ್ಥಿಕ ಸಂಪನ್ಮೂಲ ಯೋಜನೆಯಲ್ಲಿ ಹೊಲಿಗೆ ಯಂತ್ರ ಒದಗಿಸುತ್ತೇನೆ ಎಂದು ತಿಳಿಸಿದರು.ಅಧ್ಯಕ್ಷತೆವಹಿಸಿ ಮಾತನಾಡಿದ ಹುಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷೆ ಸ್ವಾತಿ ಮಾಳಗಿ, ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಮೊದಲ ಆದ್ಯತೆಯಾಗಿ ನಮ್ಮ ಸಂಸ್ಥೆ ತರಬೇತಿಗಳನ್ನು ನೀಡುತ್ತಿದೆ. ಮಹಿಳೆಯರು ತಮ್ಮ ಕೌಟುಂಬಿಕ ನಿತ್ಯ ಕೆಲಸ ಕಾರ್ಯಗಳ ಜೊತೆಗೆ ಕಾಲ ಉಳಿಸಿ ಅದನ್ನು ಆರ್ಥಿಕ ಸಂಪನ್ಮೂಲ ಮಾಡಿಕೊಳ್ಳಲು ಸಹಾಯವಾಗುವ ತರಬೇತಿಗಳನ್ಜು ನೀಡಲಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈಗಾಗಲೇ ೫೦೦ ಮಹಿಳೆಯರಿಗೆ ಹೊಲಗೆ, ಆರಿ ಕಲೆ, ಬ್ಯೂಟಿಷಿಯನ್ ಸೇರಿದಂತೆ ವಿವಿಧ ತರಬೇತಿ ನೀಡಲಾಗಿದೆ. ನಮ್ಮ ಮಹಿಳೆಯರು ಸಿದ್ಧಪಡಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶವೂ ನಮ್ಮದಾಗಿದೆ. ಮಹಳೆ ಅಬಲೆ ಅಲ್ಲ. ಅವಳ ಸಮರ್ಥ ದುಡಿಮೆಯಿಂದ ಕುಟುಂಬಕ್ಕೆ ದೊಡ್ಡ ಶಕ್ತಿಯಾಗಬಲ್ಲಳು ಎಂಬುದು ಈಗ ಸಾಬೀತಾಗಿದೆ ಎಂದರು.
ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಆಶಯ ಮಾತುಗಳನ್ನಾಡಿ, ಪರಿವರ್ತನ ಕಲಿಕಾ ಕೇಂದ್ರ ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಐಎಸ್, ಕೆಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ತರಬೇತಿ, ಸಿಇಟಿ ನೀಟ್ ಕೋಚಿಂಗ್‌ಗಳ ಮೂಲಕ ಶೈಕ್ಷಣಿಕ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದರು.ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಜೈಸನ್ ಪಾಯ್ಸ ಸಂವಿಧಾನ ಪೀಠಿಕೆ ವಾಚಿಸಿದರು. ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ, ತರಬೇತಿದಾರರಾದ ವೀಣಾ ಕೋರಿಶೆಟ್ಟರ, ಚಿಂತನಾ ಗೊಲ್ಲರ, ಶೀಲಾವತಿ ಹೆಗಡೆ ವೇದಿಕೆಯಲ್ಲಿದ್ದರು. ಶಿಕ್ಷಣಾರ್ಥಿಗಳಾದ ಅಕ್ಕಮ್ಮ ಕಾಶೀಬಾಯಿ, ಲಕ್ಷ್ಮೀ ಪವಾರ ಮಾತನಾಡಿದರು.
ರೂಪಾ ನಿಂಗೋಜಿ ಸ್ವಾಗತಿಸಿದರು. ಜ್ಯೋತಿ ಶಿಗ್ಲಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹೊಲಿಗೆ ತರಬೇತಿ ಪಡೆದ ಹಾನಗಲ್ಲ ಹಾಗೂ ಆರೆಗೊಪ್ಪ ಕಲಿಕಾ ಕೇಂದ್ರಗಳ ೧೫೦ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.