ಹಾವೇರಿ ಜಿಲ್ಲೆ ಬರಗಾಲ ಪೀಡಿತ ಎಂದು ಘೋಷಣೆ, ರೈತರ ಸಾಲ ಮನ್ನಾ, ಬರ ಆಧಾರಿತ ಬೆಳೆ ಪರಿಹಾರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜೆಡಿಎಸ್ ಹಾನಗಲ್ಲ ತಾಲೂಕು ಘಟಕ ಹಾನಗಲ್ಲಿನಿಂದ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸೆ.೨೧ರಂದು ಪಾದಯಾತ್ರೆ ಹಾಗೂ ಬೈಕ್ ರ್ಯಾಚಲಿ ಆಯೋಜಿಸಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದರು.
ಹಾನಗಲ್ಲ: ಹಾವೇರಿ ಜಿಲ್ಲೆ ಬರಗಾಲ ಪೀಡಿತ ಎಂದು ಘೋಷಣೆ, ರೈತರ ಸಾಲ ಮನ್ನಾ, ಬರ ಆಧಾರಿತ ಬೆಳೆ ಪರಿಹಾರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜೆಡಿಎಸ್ ಹಾನಗಲ್ಲ ತಾಲೂಕು ಘಟಕ ಹಾನಗಲ್ಲಿನಿಂದ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸೆ.೨೧ರಂದು ಪಾದಯಾತ್ರೆ ಹಾಗೂ ಬೈಕ್ ರ್ಯಾಲಿ ಆಯೋಜಿಸಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಹಾವೇರಿ ಜಿಲ್ಲೆ ಅದರಲ್ಲು ಹಾನಗಲ್ಲ ತಾಲೂಕಿನಲ್ಲಿ ರೈತರ ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರಿ ಕಚೇರಿಯಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ. ಈ ಬಗ್ಗೆ ಹತ್ತು ಹಲವು ಬಾರಿ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ರಸ್ತೆ ಗುಂಡಿಮಯವಾಗಿವೆ. ಸರ್ಕಾರಿ ಆಸ್ಪತ್ರೆಗಳು ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗಿವೆ. ಸರ್ಕಾರಿ ಕಚೇರಿಗಳು ದಲ್ಲಾಳಿಗಳಿಂದ ತುಂಬಿವೆ. ಪಂಚಾಯಿತಿಗಳು ಭ್ರಷ್ಟಾಚಾರ ಹಗರಣಕ್ಕೆ ತುತ್ತಾಗುತ್ತಿವೆ. ನಕಲಿ ವೈದ್ಯರ ಹಾವಳಿ ಹೇಚ್ಚಾಗಿದ್ದರೂ ತಾಲೂಕು ಆಡಳಿತ ಕಣ್‌ತೆರೆಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ ಹಾಗೂ ಬೈಕ್ ರ್ಯಾಲಿ ಆಯೋಜಿಸಿದೆ ಎಂದರು.ಸೆ. ೨೧ರಂದು ಬೆಳಗ್ಗೆ ೮ ಗಂಟೆಗೆ ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಿಂದ ಆರಂಭವಾಗುವ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿ ಗೆಜ್ಜೆಹಳ್ಳಿ, ಅಕ್ಕಿಆಲೂರು, ಬಾಳಂಬೀಡ, ಆಡೂರ, ಸಂಗೂರು ಮಾರ್ಗವಾಗಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಜಿಲ್ಲಾ ಕೋರಕಮಿಟಿ ಅಧ್ಯಕ್ಷ ಈರಣ್ಣ ನವಲಗುಂದ, ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಜಿಲ್ಲಾ ಯುವಘಟಕದ ಅಧ್ಯಕ್ಷ ರುದ್ರಗೌಡ ಪಾಟೀಲ, ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರಾದ ಬಸೆಟ್ಟೆಪ್ಪ ಗುದ್ಲಿಶೆಟ್ಟರ, ಶಿವಾನಂದ ಕರಿಗಾರ, ಮೃತ್ಯುಂಜಯ ಕೊಪ್ಪದ, ಬಸನಗೌಡ ಸಿದ್ದಪ್ಪಗೌಡ್ರ, ಲಿಂಗರಾಜ ಸತ್ಯಪ್ಪನವರ, ಅಲ್ತಾಫ ನದಾಫ್, ಮಂಜುನಾಥ ಬಣಕಾರ ಸೇರಿದಂತೆ ಗಣ್ಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ರಾಮನಗೌಡ ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಂದೀಶ ಕ್ಷೌರದ, ಹಜರತಲಿ ಗುಮ್ಜದ ಇದ್ದರು.