ಕಾರಟಗಿ ಪಟ್ಟಣದಲ್ಲಿ ಅ. 3 ಮತ್ತು 4ರಂದು ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಪ್ರಮುಖ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ, ಸಂಶೋಧಕ ಹಾಗೂ ಬರಹಗಾರ ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರಟಗಿ: ಪಟ್ಟಣದಲ್ಲಿ ಅ. 3 ಮತ್ತು 4ರಂದು ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಪ್ರಮುಖ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ, ಸಂಶೋಧಕ ಹಾಗೂ ಬರಹಗಾರ ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ಪ್ರಕಟಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪರಿಷತ್ತಿನ ಜಿಲ್ಲಾ ಕಾರ್ಯಕಾರಿಣಿ ಸಭೆಯ ತೀರ್ಮಾನದಂತೆ, 15ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗಂಗಾವತಿ ಭಾಗದ ಪ್ರಾಗೈತಿಹಾಸಿಕ ತಾಣಗಳು, ಗವಿಚಿತ್ರಗಳು ಹಾಗೂ ಶಾಸನಗಳ ಕುರಿತು ಸುದೀರ್ಘ ಕ್ಷೇತ್ರ ಸಂಶೋಧನೆ ನಡೆಸಿರುವ ಇತಿಹಾಸ ತಜ್ಞ, ಸಂಶೋಧಕ ಹಾಗೂ ಪ್ರಸ್ತುತ ಗಂಗಾವತಿ ನಗರದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಆಯ್ಕೆ ಮಾಡಲಾಗಿದೆ.ಕಸಾಪ ಸಮ್ಮೇಳನ ಈ ಬಾರಿ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಪರಿಷತ್ತಿನ ಅಜೀವ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು, ಎಲ್ಲ ಇಲಾಖೆಗಳು ಸಹಕಾರ ನೀಡಲಿವೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸ್ವಕ್ಷೇತ್ರದಲ್ಲಿಯೇ ನಡೆಯುವಂತಹ ಈ ಸಮ್ಮೇಳನ ಅವಿಸ್ಮರಣೀಯವಾಗಿರಲಿದೆ ಎಂದರು.
ಬಳಿಕ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ಡಾ. ಶರಣಬಸಪ್ಪ ಕೋಲ್ಕಾರ್ ಅವರು, ಸಂಶೋಧಕರಾಗಿ ಗಂಗಾವತಿ ಸೇರಿದಂತೆ ಜಿಲ್ಲೆಯ ಅನೇಕ ಸ್ಥಳ, ಶಾಸನಗಳ ಬಗ್ಗೆ ಅಧ್ಯಯನ ಮಾಡಿ, 40ಕ್ಕೂ ಅಧಿಕ ಅಪ್ರಕಟಿತ ಶಾಸನಗಳನ್ನು ಪ್ರಕಟಿಸಿದ್ದಾರೆ. 13ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು, 15 ಸ್ಮರಣ ಸಂಚಿಕೆ, 4 ಅಭಿನಂದನಾ ಗ್ರಂಥಗಳನ್ನು, ನೂರಾರು ಸಂಶೋಧನಾ ಮತ್ತು ಸಾಂಸ್ಕೃತಿಕ ಲೇಖನಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಪತ್ರಿಕೆಗಳಿಗೆ ಬರೆದು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ತಾಲೂಕಿನ ಬೂದಗುಂಪಾ ಗ್ರಾಮದವರೇ ಆದ ಅವರ ಸಾಹಿತ್ಯಿಕ, ಸಾಂಸ್ಕೃತಿಕ ಸಾಧನೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.21 ವರ್ಷದ ಬಳಿಕ ಕಾರಟಗಿ ಪಟ್ಟಣದಲ್ಲಿ 2ನೇ ಬಾರಿಗೆ ಜಿಲ್ಲಾ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ವಿಶೇಷ. ಈ ಸಮ್ಮೇಳನದ ಮೂಲಕ ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ, ಜನಪದ ಕಲೆಗಳು, ಇಲ್ಲಿನ ಕೃಷಿ, ಶಿಕ್ಷಣ, ಉದ್ಯಮ, ನೀರಾವರಿ ಕುರಿತು ಚರ್ಚೆ ನಡೆಯಲಿವೆ ಎಂದರು.
ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಪೊಲೀಸ್ ಪಾಟೀಲ್, ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಸನ್ನಕುಮಾರ್ ದೇಸಾಯಿ, ಕಸಾಪ ಗಂಗಾವತಿ ಘಟಕದ ಅಧ್ಯಕ್ಷ ಎಂ. ರುದ್ರೇಶ್, ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ರ್ಯಾವಳದ, ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಇದ್ದರು.