ಧಾರವಾಡ:
ಧಾರವಾಡದ ಜ್ಯುಬಿಲಿ ವೃತ್ತ, ಹಳೇ ಎಸ್ಪಿ ವೃತ್ತ, ಕರ್ನಾಟಕ ಕಾಲೇಜು ರಸ್ತೆ ಹಾಗೂ ವೃತ್ತ, ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಅಂಬೇಡ್ಕರ ವೃತ್ತ, ಮಹಾನಗರ ಪಾಲಿಕೆ ರಸ್ತೆ, ಉಣಕಲ್ ಕ್ರಾಸ್, ಕೇಶ್ವಾಪೂರ, ಹೊಸೂರ ಕ್ರಾಸ್, ಗೋಕುಲ ರಸ್ತೆ, ಇಂಡಿ ಪಂಪ ವೃತ್ತ, ಗ್ಲಾಸ್ ಹೌಸ್, ದೇಶಪಾಂಡೆ ನಗರ, ಕುಸುಗಲ್ ರೋಡ್ ಹೀಗೆ ಅನೇಕ ಕಡೆಗಳಲ್ಲಿ ಹಾಕಲಾಗಿದ್ದ ಸರಿಸುಮಾರು 150ಕ್ಕೂ ಹೆಚ್ಚು ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.
ಪಾಲಿಕೆಯು ಪಕ್ಷಾತೀತವಾಗಿ ಈ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ಬ್ಯಾನರ್ ಕಟ್ಟಿದ್ದ ಒಬ್ಬರೂ ಪ್ರಶ್ನಿಸದೇ ಇರುವುದು ವಿಶೇಷ. ರಾಜಕೀಯ ಸಮಾವೇಶ, ವಿವಿಧ ಮಹನೀಯರ ಜಯಂತಿ, ಜನ್ಮದಿನ, ಜಾತ್ರೆಗಳಲ್ಲದೇ ಇತ್ತೀಚೆಗೆ ಅವಳಿ ನಗರದ ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಬ್ಯಾನರ್ ಕಟ್ಟುವುದು ಫ್ಯಾಷನ್ ಆಗಿದೆ. ಕೆಲವು ಸ್ಥಳಗಳ ಮಹತ್ವ ಸಹ ಅರಿಯದೇ ಬ್ಯಾನರ್ ಕಟ್ಟಿ ಮಹನೀಯರ ಮೂರ್ತಿಗಳನ್ನು ಮರೆಮಾಚುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರು ಸಹ ಬೇಸತ್ತು ಹೋಗಿದ್ದರು.ಇಷ್ಟು ದಿನ ಬ್ಯಾನರ್ ಕಟ್ಟುವ, ತೆರವುಗೊಳಿಸುವ ವಿಚಾರವಾಗಿ ಸಾಕಷ್ಟು ವಾದ-ವಿವಾದಗಳೂ ಸಹ ಆಗಿದ್ದವು. ಆದರೆ, ಬಳ್ಳಾರಿ ಹಾಗೂ ಶಿಡ್ಲಘಟ್ಟದಲ್ಲಿ ಬ್ಯಾನರ್ ವಿಚಾರವಾಗಿ ನಡೆದಿರುವ ಗಂಭೀರ ಘಟನೆಯಿಂದಾಗಿ ಪಾಲಿಕೆಯು ಸಮಯವನ್ನು ಸದುಪಯೋಗಪಡಿಸಿಕೊಂಡು ಬ್ಯಾನರ್ ರಾಜಕೀಯಕ್ಕೆ ಬ್ರೇಕ್ ನೀಡಿದೆ.
ಹು-ಧಾ ಅವಳಿ ನಗರದ ವಿವಿಧ ಪ್ರದೇಶದಲ್ಲಿ ಹಾಕಲಾಗಿದ್ದ ಅನಧಿಕೃತ ಬ್ಯಾನರ್, ಕಟೌಟ್ ಗಳನ್ನು ಪಕ್ಷಾತೀತವಾಗಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಗೆ ನಾವು ಸಹ ಸಾಥ್ ನೀಡಿದ್ದು, ಶುಕ್ರವಾರ ಧಾರವಾಡದ ಅನೇಕ ಕಡೆಗಳಲ್ಲಿ ಮುಂದೆ ನಿಂತು ತೆರವುಗೊಳಿಸಲಾಗಿದೆ. ಇದು ಬರೀ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪಾಲಿಕೆಯು ಇನ್ಮುಂದೆ ನಿರ್ದಾಕ್ಷಿಣ್ಯವಾಗಿ ಬ್ಯಾನರ್ ತೆರವುಗೊಳಿಸಲು ಆಯುಕ್ತರಿಗೆ ತಿಳಿಸಲಾಗಿದೆ. ಅದಕ್ಕಿಂತ ಹೆಚ್ಚಾಗಿ ಬ್ಯಾನರ್ ಕಟ್ಟುವವರು ಸಹ ನಗರದ ಸೌಂದರ್ಯೀಕರಣದ ಬಗ್ಗೆ ಯೋಚಿಸಬೇಕು. ಪತ್ರಿಕಾಗೋಷ್ಠಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾಹಿತಿಯನ್ನು ಸಾರ್ವಜನಿಕರಿಗೆ ಹಂಚಬೇಕೆ ಹೊರತು ಬ್ಯಾನರ್ ಹಾಕಿಯೇ ಸುದ್ದಿ ಮುಟ್ಟಿಸುವ ಕೆಲಸವನ್ನು ಇನ್ನಾದರೂ ಕೈ ಬಿಡಬೇಕು ಎಂದು ಪಾಲಿಕೆಯ ಮಾಜಿ ಮೇಯರ್ ಈರೇಶ ಅಂಚಟಗೇರಿ ಮನವಿ ಮಾಡಿದ್ದಾರೆ.