ಹುಬ್ಬಳ್ಳಿ:
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 24ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈಗಾಗಲೇ ಮೊದಲ ಹಂತದಲ್ಲಿ 36,789 ಮನೆ ವಿತರಿಸಿದ್ದು 2ನೇ ಹಂತದಲ್ಲಿ 42,345 ಮನೆ ಹಂಚಿಕೆ ಮಾಡಲಾಗುತ್ತಿದೆ. 3ನೇ ಹಂತದಲ್ಲಿ 30 ಸಾವಿರ ಮನೆಗಳನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದ ಅವರು, ಈಗ ನೀಡುತ್ತಿರುವ ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1008 ಸೇರಿ ಧಾರವಾಡ ಜಿಲ್ಲೆಯಲ್ಲಿ 2,767 ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.ಈ ಯೋಜನೆಯಲ್ಲಿ ಒಟ್ಟು 1,80,253 ಮನೆ ನಿರ್ಮಿಸುತ್ತಿದ್ದು ರಾಜ್ಯ ಸರ್ಕಾರ ತಲಾ ₹ 4 ಲಕ್ಷ ನೀಡುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಸಿಗಲಿದೆ. ಫಲಾನುಭವಿಗಳು ಕೇವಲ ₹ 1 ಲಕ್ಷ ಪಾವತಿಸಬೇಕು ಎಂದ ಅವರು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೊಳಗೇರಿ ವಾಸಿಗಳಿಗೆ 20,363 ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮಂಡಳಿಯಿಂದ ಬಡವರಿಗೆ ಸೂರು ಕಲ್ಪಿಸುವ ದೂರದೃಷ್ಟಿಯೊಂದಿಗೆ ಮನೆ ನಿರ್ಮಿಸಿ ವಿತರಿಸಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನವನ್ನು ಸಹ ಇದು ಒಳಗೊಂಡಿದೆ. ಈಗಾಗಲೇ 860 ಮನೆಗಳನ್ನು ಆಶ್ರಯ ಯೋಜನೆಯಡಿ ನಿರ್ಮಿಸಲಾಗಿದೆ ಎಂದು ಹೇಳಿದರು.