13 ವರ್ಷ ಬಳಿಕ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅನುಮತಿ - ಅಕ್ರಮ ಗಣಿ ಕೇಸಲ್ಲಿ ಪ್ರವೇಶಕ್ಕೆ ನಿಷೇಧವಿತ್ತು

Published : Oct 01, 2024, 07:51 AM IST
Who is G. Janardhana Reddy

ಸಾರಾಂಶ

ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಬಳ್ಳಾರಿಯಿಂದ ದೂರವಿದ್ದು 13 ವರ್ಷ ಕಾಲ ‘ವನವಾಸ’ ಅನುಭವಿಸಿದ್ದ ಮಾಜಿ ಸಚಿವ, ಹಾಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರಿಗೆ ಕೊನೆಗೂ ಬಳ್ಳಾರಿಯಲ್ಲಿ ನೆಲೆಸಲು ಸುಪ್ರೀಂಕೋರ್ಟ್‌ ಸೋಮವಾರ ಅನುಮತಿ ನೀಡಿದೆ.

ನವದೆಹಲಿ/ಬಳ್ಳಾರಿ  : ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಬಳ್ಳಾರಿಯಿಂದ ದೂರವಿದ್ದು 13 ವರ್ಷ ಕಾಲ ‘ವನವಾಸ’ ಅನುಭವಿಸಿದ್ದ ಮಾಜಿ ಸಚಿವ, ಹಾಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರಿಗೆ ಕೊನೆಗೂ ಬಳ್ಳಾರಿಯಲ್ಲಿ ನೆಲೆಸಲು ಸುಪ್ರೀಂಕೋರ್ಟ್‌ ಸೋಮವಾರ ಅನುಮತಿ ನೀಡಿದೆ. ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಸಿಗುತ್ತಿದ್ದಂತೆ ಅವರ ಬೆಂಬಲಿಗರು ಬಳ್ಳಾರಿಯಲ್ಲಿ ಪಟಾಕಿ ಸಿಡಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ಅ.3ರಂದು ಅಂದರೆ ನವರಾತ್ರಿಯಂದೇ ರೆಡ್ಡಿ ಬಳ್ಳಾರಿಗೆ ಕಾಲಿಡುವ ನಿರೀಕ್ಷೆ ಇದೆ.

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಓಬಳಾಪುರಂ ಗಣಿಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಆರೋಪದಡಿ 2011ರ ಸೆಪ್ಟೆಂಬರ್‌ 5ರಂದು ಆಂಧ್ರಪ್ರದೇಶದ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ, ಹೈದರಾಬಾದ್‌ನ ಚಂಚಲಗುಡ ಜೈಲಿಗೆ ಕಳುಹಿಸಿದ್ದರು. ಕರ್ನಾಟಕದಲ್ಲೂ ಅಕ್ರಮ ಗಣಿಗಾರಿಕೆ ಹಾಗೂ ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿ ಅವರು ಕೆಲಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರು.

ಒಟ್ಟು 4.9 ವರ್ಷ ಜೈಲು ವಾಸ ಅನುಭವಿಸಿ 2015ರಲ್ಲಿ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಸಾಕ್ಷ್ಯ ನಾಶದ ಸಾಧ್ಯತೆ ಹಿನ್ನೆಲೆಯಲ್ಲಿ ಬಳ್ಳಾರಿ, ಆಂಧ್ರಪ್ರದೇಶದ ಕಡಪ ಹಾಗೂ ಅನಂತಪುರ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧಿಸಿ ಹೈದರಾಬಾದ್‌ನ ಸಿಬಿಐ ನ್ಯಾಯಾಲಯ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಾದರೂ ಸರ್ವೋಚ್ಚ ನ್ಯಾಯಾಲಯ ಕೂಡ ಸಿಬಿಐ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ಆದರೆ ಪುತ್ರಿ ಮದುವೆ, ಮೊಮ್ಮಗಳ ನಾಮಕರಣ ಮತ್ತಿತರ ಸಂದರ್ಭಗಳಲ್ಲಿ ಕೋರ್ಟ್ ಪೂರ್ವಾನುಮತಿ ಪಡೆದು ಜನಾರ್ದನರೆಡ್ಡಿ ಐದು ಬಾರಿ ಬಳ್ಳಾರಿಗೆ ಕೆಲ ದಿನಗಳ ಕಾಲ ಬಂದು ಹೋಗಿದ್ದರು. ಈ ವೇಳೆ ಬಳ್ಳಾರಿಯಿಂದ ದೂರವುಳಿಯಬೇಕಾದ ಪರಿಸ್ಥಿತಿ ಕುರಿತು ಅವರು ಅನೇಕ ಬಾರಿ ನೋವು ತೋಡಿಕೊಂಡಿದ್ದರು. ಇದೀಗ ಬಳ್ಳಾರಿಯಲ್ಲೇ ಉಳಿಯಲು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌, ನ್ಯಾ. ಅರವಿಂದ ಕುಮಾರ್‌ ಅವರಿದ್ದ ಪೀಠ ಅಸ್ತು ಎಂದಿರುವುದು ರೆಡ್ಡಿ ಮಾತ್ರವಲ್ಲದೆ, ಅವರ ಆಪ್ತ ಬಳಗ ಸೇರಿ ಬಿಜೆಪಿ ಪಾಳಯದಲ್ಲೂ ಸಂತಸ ಮೂಡಿಸಿದೆ.

ರಾಜಕೀಯ ಸಮೀಕರಣ ಬದಲು:

ರೆಡ್ಡಿ ಆಗಮನ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದ್ದು, ಅವರ ಆಪ್ತ ಬಳಗದ ಹುಮ್ಮಸ್ಸು ಹೆಚ್ಚಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದೇ ಜನಾರ್ದನ ರೆಡ್ಡಿ. ರೆಡ್ಡಿ ಬಳ್ಳಾರಿಯಲ್ಲಿರುವವರೆಗೂ ಎಲ್ಲ ಚುನಾವಣೆಯಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. 2009ರ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಬಿಗಿಹಿಡಿತ ಹೊಂದಿದ್ದರು. ಹೀಗಾಗಿ ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಸಚಿವರಾದರು. ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾದರು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ ಜೈಲು ಪಾಲಾದ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಾ ಸಾಗಿತು. ಜಿಲ್ಲೆಯ ರಾಜಕೀಯ ವರ್ಚಸ್ಸೂ ಕುಂದಿತು. ಇದೀಗ ರೆಡ್ಡಿ ಅವರಿಗೆ ಬಳ್ಳಾರಿ ಮಾತ್ರವಲ್ಲದೆ ಆಂಧ್ರದ ಕಡಪ, ಅನಂತಪುರ ಜಿಲ್ಲೆಗಳಿಗೂ ಪ್ರವೇಶಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಬಳ್ಳಾರಿಯಲ್ಲಿ ಸಂಭ್ರಮಾಚರಣೆ:

ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡುತ್ತಿದ್ದಂತೆ ನಗರದ ಎಸ್ಪಿ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ರೆಡ್ಡಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಬಳಿಕ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಾಸ್‌ ಈಸ್‌ ಬ್ಯಾಕ್, ವೆಲ್‌ಕಮ್ ಟು ಬಳ್ಳಾರಿ ಜಿಜೆಆರ್ ಎಂಬ ಬ್ಯಾನರ್‌ ಹಿಡಿದು, ಕುಣಿದು ಕುಪ್ಪಳಿಸಿದರು. ಅ.3ರಂದು ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮಿಸಲಿದ್ದು, ಸುಮಾರು 20 ಸಾವಿರ ಜನರನ್ನು ಸೇರಿಸಿ ಅದ್ಧೂರಿಯಾಗಿ ಬಳ್ಳಾರಿಗೆ ಸ್ವಾಗತ ಮಾಡಿಕೊಳ್ಳಲು ಸಜ್ಜಾಗಿದ್ದೇವೆ ಎಂದು ಬಿಜೆಪಿ ಮುಖಂಡ ಕೆ.ಎಸ್. ದಿವಾಕರ್ ತಿಳಿಸಿದರು.

ಕೊನೆಯವರೆಗೂ ಬಳ್ಳಾರೀಲೇ ವಾಸ

ಜನ್ಮಸ್ಥಳ ಪ್ರತಿಯೊಬ್ಬನಿಗೂ ಮುಖ್ಯ. ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು. ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲೇ ಇರುವೆ. ಅ.3ರಂದು ನವರಾತ್ರಿ ಆರಂಭದ ದಿನ ಬಳ್ಳಾರಿ ಪ್ರವೇಶ ಮಾಡುತ್ತೇನೆ.

- ಜಿ.ಜನಾರ್ದನ ರೆಡ್ಡಿ ಬಿಜೆಪಿ ಶಾಸಕ

ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಿರುವುದು ತೀವ್ರ ಸಂತಸ ತಂದಿದೆ. ರೆಡ್ಡಿಯವರಿಲ್ಲದ ಬಳ್ಳಾರಿಯ ರಾಜಕೀಯ ಕಳೆಗುಂದಿತ್ತು. ಇದೀಗ ಪಕ್ಷಕ್ಕೆ ದೊಡ್ಡ ಬಲ ಬಂದಿದೆ.

- ದಮ್ಮೂರು ಶೇಖರ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಿರುವುದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅಪಾರ ಸಂತಸ ಉಂಟುಮಾಡಿದೆ. ಬಳ್ಳಾರಿಯಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವಾಗಲಿದೆ.

-ಗೋನಾಳ್ ರಾಜಶೇಖರಗೌಡ, ಬಳ್ಳಾರಿ ಬಿಜೆಪಿ ಮುಖಂಡ

PREV
Stay informed with the latest news from Ballari district (ಬಳ್ಳಾರಿ ಸುದ್ದಿ) — covering mining & industry, local governance, civic issues, heritage & tourism, community events, agriculture, environment and regional developments on Kannada Prabha News.

Recommended Stories

ಬಳ್ಳಾರಿ - ಗುಂಡೇಟಿಗೆ ಯುವಕ ಬಲಿ - ನಗರದಲ್ಲಿ 144 ಸೆಕ್ಷನ್ ಜಾರಿ
ಆಂಧ್ರ ಗಡಿಯಲ್ಲಿ ಕನ್ನಡ ಶಾಲಾರಂಭಕ್ಕೆ ನೆರವು ನೀಡಿದ್ದ ಚನ್ನಬಸವ ಶಿವಯೋಗಿ