;Resize=(412,232))
ಬಳ್ಳಾರಿ : ಜನವರಿ 1ರ ರಾತ್ರಿ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಅಂದು ಗಲಾಟೆ ನಡೆಯಲು ಜನಾರ್ದನ ರೆಡ್ಡಿಯವರ ಬೆಂಬಲಿಗರೇ ಕಾರಣ ಎಂಬ ಸಂಗತಿ ಬಯಲಾಗಿದೆ ಎಂದು ತಿಳಿದು ಬಂದಿದೆ.
ಬ್ಯಾನರ್ ತೆರವು ಖಂಡಿಸಿ ಜನಾರ್ದನ ರೆಡ್ಡಿ ಮನೆಯ ಮುಂದೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ, ಪ್ರತಿಭಟನೆಗೆ ಕುಳಿತವರ ಮೇಲೆ ಮೊದಲು ದಾಳಿ ಮಾಡಿದ್ದು ಜನಾರ್ದನ ರೆಡ್ಡಿ ಕಡೆಯವರು ಎಂಬ ಸಂಗತಿ ಬಯಲಾಗಿದೆ.
ಈ ಮಧ್ಯೆ, ಜನಾರ್ದನ ರೆಡ್ಡಿ ನಿವಾಸದಲ್ಲಿ ರಾಶಿ ರಾಶಿ ದೊಣ್ಣೆಗಳನ್ನು ಇಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬ್ಯಾನರ್ ಗಲಾಟೆ ವೇಳೆ ನಡೆದ ಗುಂಪು ಘರ್ಷಣೆ ಒಂದೇ ಕಡೆಯಿಂದ ನಡೆದಿಲ್ಲ. ಎರಡೂ ಕಡೆಯಿಂದ ಆಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ಲೇಷಿಸುತ್ತಿದ್ದಾರೆ.
ಘಟನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಮುಖಂಡರು ಹಾಗೂ ಬೆಂಬಲಿಗರು ದೊಣ್ಣೆಗಳನ್ನು ಹಿಡಿದು ನಿಂತಿರುವುದು, ಕೂಗಾಟ ನಡೆಸುವ ವೀಡಿಯೋಗಳನ್ನು ಎರಡೂ ಕಡೆಯವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಗಲಭೆ ಪ್ರಕರಣವನ್ನು ಜೀವಂತವಾಗಿರಿಸಿದ್ದಾರೆ.