ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಬಡಾವಣೆಯೊಂದರಲ್ಲಿ ಒಳಚರಂಡಿ ಕಾಮಗಾರಿ ವೇಳೆ ಕಲ್ಲುಬಂಡೆಯನ್ನು ಅನಧಿಕೃತ ಸ್ಫೋಟಕ ಬಳಸಿ ಸಿಡಿಸಿದ ಹಿನ್ನೆಲೆ ಶನಿವಾರ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಅಪರಾಧ ಪರಿಶೀಲನಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಡಾವಣೆಯಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ಗುಂಡಿ ತೋಡುವಾಗ ದೊಡ್ಡ ಪ್ರಮಾಣದ ಕಲ್ಲುಬಂಡೆ ಎದುರಾಗಿದ್ದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಬುಧವಾರ ಮಧ್ಯಾಹ್ನ ನಡೆದ ಈ ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಘಟನೆ ಕುರಿತು ಪರಿಶೀಲನೆ ನಡೆಸಿದ ಪೊಲೀಸರು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸ್ಫೋಟಕ ಬಳಕೆ ಮಾಡಲಾಗಿದೆ ಎಂದು ಕಂಡುಹಿಡಿದು, ಗುರುವಾರ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಹಿನ್ನೆಲೆ ಕಲಬುರಗಿಯಿಂದ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಬಳ್ಳಾರಿಯ ಅಪರಾಧ ಪರಿಶೀಲನಾ ತಂಡವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.
ತಂಡದ ಅಧಿಕಾರಿಗಳು ಸ್ಫೋಟ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬಳಸಲಾದ ಸ್ಫೋಟಕದ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಿದರು. ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಸ್ಫೋಟಕ ಬಳಕೆ ಮಾಡಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.ಈ ಸಂಬಂಧ ನಿವೇಶನ ಮಾಲೀಕ ಹಾಗೂ ಕಾಮಗಾರಿ ನಡೆಸುತ್ತಿದ್ದ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸ್ಫೋಟಕವನ್ನು ಯಾವ ಮೂಲದಿಂದ ಪಡೆದುಕೊಂಡರು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಗತ್ಯ ಪರವಾನಗಿ ಇಲ್ಲದೇ ಸ್ಫೋಟಕ ಬಳಕೆ ಮಾಡಿರುವ ಕುರಿತು ಸಂಬಂಧಿತ ಕಾನೂನು ವಿಧಿಗಳಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂತಹ ಅಪಾಯಕಾರಿಯಾದ ಕ್ರಮಗಳನ್ನು ತಡೆಯಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.