ಬಳ್ಳಾರಿ: ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಕೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಇಲ್ಲಿನ ತಾಳೂರು ರಸ್ತೆಯಲ್ಲಿರುವ ಪ್ಯೂಪಿಲ್‌ ಟ್ರೀ ಕಾಲೇಜು ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ದ್ವಾರದ ಮುಂಭಾಗ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ ಎಬಿವಿಪಿ ಕಾರ್ಯಕರ್ತರು, ಬಳಿಕ ಕಾಲೇಜು ಆವರಣದೊಳಗೆ ನುಗ್ಗಿ ಪೀಠೋಪಕರಣಗಳು, ಮುಖ್ಯಗುರುಗಳ ಕೋಣೆಯ ಕಿಟಕಿ ಗಾಜು, ಗಿಡಗಳ ಕುಂಡಗಳನ್ನು ಒಡೆದು ಹಾಕಿದರು.

ಇದೇ ವೇಳೆ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಬಂದ ಪೊಲೀಸರು ಹಾಗೂ ಕಾಲೇಜಿನ ಸಿಬ್ಬಂದಿ ಜೊತೆ ವಾಗ್ವಾದ ನಡೆಯಿತು.

ಕಾಲೇಜು ಆವರಣದಲ್ಲಿಯೇ ಕೆಲ ಹೊತ್ತು ಪ್ರತಿಭಟನಾ ಧರಣಿ ನಡೆಸಿದ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಪ್ಯೂಪಿಲ್ ಟ್ರೀ ಕಾಲೇಜಿನ ಆಡಳಿತ ಮಂಡಳಿಯ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಈ ವೇಳೆ ಮಾತನಾಡಿದ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ ಹಾಗೂ ಅಭಿಷೇಕ ಹಿರೇಮಠ, ಕಳೆದ ಕೆಲ ತಿಂಗಳಿಂದ ಶಾಲಾ ಕಾಲೇಜಿಗೆ ಗಾಂಜಾ ಸರಬರಾಜು ಆಗುತ್ತಿರುವ ಬಗ್ಗೆ ಸ್ಥಳೀಯ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಳ್ಳುವ ಜತೆಗೆ ನಮ್ಮಲ್ಲಿ ಕೆಲ ವೀಡಿಯೋಗಳು ಲಭ್ಯವಿದೆ. ಗಾಂಜಾ ಸೇವನೆ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದರೂ ಈವರೆಗೂ ಗಾಂಜಾ ಸೇವಿಸಿದ ವಿದ್ಯಾರ್ಥಿಗಳ ಹಾಗೂ ಸರಬರಾಜು ಮಾಡುತ್ತಿರುವರ ಮೇಲೆ ಯಾವುದೇ ಕ್ರಮ ವಹಿಸಿಲ್ಲ. ಬೃಹತ್‌ ಪ್ರತಿಭಟಿಸಿ, ಗೋ ಮೂತ್ರವನ್ನು ಕಾಲೇಜು ಆವರಣದಲ್ಲಿ ಚಿಮ್ಮುವ ಮೂಲಕ ಸ್ವಚ್ಛಗೊಳಿಸುವ ಉದ್ದೇಶ ಹೊಂದಿತ್ತು. ಆದರೆ, ಆಡಳಿತ ಮಂಡಳಿ ಪ್ರತಿಭಟನೆಗೆ ಸಹಕಾರ ನೀಡಿಲ್ಲ. ಪೊಲೀಸರು ಹಾಗೂ ಕಾಲೇಜು ಸಿಬ್ಬಂದಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.


ವಿದ್ಯಾರ್ಥಿ ಮುಖಂಡರ ಬಂಧನ:

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ನಾಲ್ಕೈದು ಜನ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಬ್ರೂಸ್‌ಪೇಟೆ ಠಾಣೆ ಪಿಐ ಮಹಾಂತೇಶ್ ಹಾಗೂ ಸಿಬ್ಬಂದಿ ಪ್ರತಿಭಟನಾ ನಿರತ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿದರು.

ಸ್ಥಳಕ್ಕೆ ಆಗಮಿಸಿದ ಎಸ್ಪಿ ಡಾ.ಸುಮನ್‌ ಡಿ. ಪನ್ನೇಕರ್‌ ಘಟನಾ ನಡೆದ ಸ್ಥಳ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರತಿಭಟನೆಗೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಗುಪ್ತಚರ ಮಾಹಿತಿ ಮೇರೆಗೆ ಮುನ್ನೆಚ್ಚರಿಕೆಯಾಗಿ ಮೂವರು ಸಿಬ್ಬಂದಿ ನಿಯೋಜಿಸಲಾಗಿತ್ತು. ಸಾಮಾನ್ಯ ಪ್ರತಿಭಟನೆಯ ಹೆಸರಿನಲ್ಲಿ ಬಂದ ಕಾರ್ಯಕರ್ತರು ಪೊಲೀಸರನ್ನು ನೂಕಿಕೊಂಡು ಕಾಲೇಜು ಆವರಣದೊಳಗೆ ನುಗ್ಗಿದ್ದಾರೆ. ಇದು ಕೇವಲ ಪ್ರತಿಭಟನೆಯಲ್ಲ. ಗಲಾಟೆ ಮಾಡುವ ಉದ್ದೇಶದಿಂದಲೇ ಬಂದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಕಾಲೇಜಿನಲ್ಲಿ ಗಾಂಜಾ ಸೇದುತ್ತಿರುವ ವಿಡಿಯೋ ಇದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಆ ವಿಡಿಯೋ ಹಳೆಯದೋ ಅಥವಾ ಹೊಸದೋ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಇಂತಹ ಮಾಹಿತಿ ಇದ್ದರೆ ಮೊದಲು ಪೊಲೀಸರಿಗೆ ನೀಡಬೇಕಿತ್ತು. ಗಲಾಟೆ ನಡೆಸಿ, ಆಸ್ತಿಗೆ ಹಾನಿ ಮಾಡಿದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಪನ್ನೇಕರ್ ತಿಳಿಸಿದರು.

ಪ್ಯೂಪಿಲ್‌ ಟ್ರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರಭುದೇವ ಜಾಹಗೀರದಾರ್ ಮಾತನಾಡಿ, ಕಾಲೇಜಿನಲ್ಲಿ ಗಾಂಜಾ ಸರಬರಾಜು ಎಂಬುದು ಸತ್ಯಕ್ಕೆ ದೂರವಾದದ್ದು. ಸಂಘಟನೆಯ ಪದಾಧಿಕಾರಿಗಳು ಈವರೆಗೆ ಆಡಳಿತ ಮಂಡಳಿಗೆ ಯಾವುದೇ ಪೂರಕ ದಾಖಲೆ ಹಾಗೂ ಮಾಹಿತಿಯೂ ನೀಡಿಲ್ಲ. ಕೆಲವರ ಕುತಂತ್ರದಿಂದ ಕಾಲೇಜಿಗೆ ಕೆಟ್ಟ ಹೆಸರು ತರುವ ಉದ್ದೇಶ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ವೇಳೆ ಇವರ ಬಳಿಕ ಪೂರಕವಾದ ದಾಖಲೆಗಳು ಇದ್ದಿದ್ದರೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದಿತ್ತು. ಕಾಲೇಜಿಗೆ ಬಂದು ದಾಂಧಲೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.