ಬಳ್ಳಾರಿ: ಪ್ರವಾಸಕ್ಕೆಂದು ದುಬೈಗೆ ತೆರಳಿ ಸಿಲುಕಿಕೊಂಡಿದ್ದ ಬಳ್ಳಾರಿಯ ಪ್ರವಾಸಿಗರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ದುಬೈಗೆ ತೆರಳಿದವರು ಬೆಂಗಳೂರಿಗೆ ಗುರುವಾರ ಬೆಳಿಗ್ಗೆ ಆಗಮಿಸುತ್ತಿದ್ದಾರೆ ಎಂದು ಖಚಿತವಾಗುತ್ತಿದ್ದಂತೆಯೇ ಬಳ್ಳಾರಿಯಿಂದ ತೆರಳಿದ್ದ ಕುಟುಂಬ ಸದಸ್ಯರು, ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ಬೆಂಬಲಿಗರು ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ದುಬೈ ಪ್ರವಾಸಿಗರು, ದುಬೈ ವೀಕ್ಷಣೆ ಮಾಡಲೆಂದು ಇದೇ ಮೊದಲ ಬಾರಿಗೆ ತೆರಳಿದ್ದೆವು. ಇರಾನ್ ಹಾಗೂ ಅಮೆರಿಕ ಯುದ್ಧದಿಂದಾಗಿ ನಾವು ತೀವ್ರ ಆತಂಕಕ್ಕೊಳಗಾಗಿದ್ದೆವು. ದುಬೈ ಅತ್ಯಂತ ಸುರಕ್ಷಿತ ಸ್ಥಳ ನಿಮಗೇನೂ ಆಗುವುದಿಲ್ಲ ಎಂದಿದ್ದರು. ನಾವು ನಿರಾಳದಲ್ಲಿದ್ದೆವು. ಆದರೆ, ಮಿಸೈಲ್‌ಗಳು ದುಬೈಗೆ ಬಂದು ಬೀಳುತ್ತಿದ್ದಂತೆಯೇ ನಮಗೆ ತೀವ್ರ ಆತಂಕವಾಯಿತು. ಯಾವಾಗ ಏನು ಆಗುತ್ತದೆಯೋ ಎಂಬ ಭೀತಿಯಲ್ಲಿದ್ದೆವು. ಆಗ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಕರೆ ಮಾಡಿ ಧೈರ್ಯ ತುಂಬಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಲೇಬೇಕು. ಭಾರತೀಯರ ರಕ್ಷಣೆಗಾಗಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ನಾವಷ್ಟೇ ಅಲ್ಲ; ಭಾರತೀಯ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ತರುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದುಬೈನ ರಾಯಭಾರ ಕಚೇರಿಯ ಅಧಿಕಾರಿಗಳು ಸಹ ನಮಗೆ ಸಹಾಯ ಮಾಡಿದರು. ದುಬೈ ಕನ್ನಡ ಸಂಘದವರು ಬರುವವರೆಗೆ ನಮ್ಮ ಕಾಳಜಿ ತೆಗೆದುಕೊಂಡಿದ್ದರು. ಪ್ರತಿ ಕ್ಷಣದಲ್ಲೂ ನಮಗೆ ಧೈರ್ಯ ತುಂಬುತ್ತಿದ್ದರು ಎಂದು ಕನ್ನಡಪ್ರಭಕ್ಕೆ ತಿಳಿಸಿದರು.ದುಬೈಗೆ ತೆರಳಿದವರು ವಾಪಸ್ ಬರುತ್ತಿದ್ದಂತೆಯೇ ಕುಟುಂಬ ಸದಸ್ಯರು ಅತ್ಯಂತ ಸಂಭ್ರಮಗೊಂಡರು. ಫೆ.24 ರಂದು ಬಳ್ಳಾರಿಯಿಂದ 27 ಜನರು ಖಾಸಗಿ ಪ್ರವಾಸಿ ಏಜೆನ್ಸಿ ಮುಲಕ ದುಬೈ ವೀಕ್ಷಣೆಗೆ ತೆರಳಿದ್ದರು. ದುಬೈ ಪ್ರವಾಸಕ್ಕೆ ಪ್ರತ್ಯೇಕವಾಗಿ ಐವರು ಕುಟುಂಬ ಸದಸ್ಯರ ಜೊತೆ ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಸಹ ದುಬೈನಲ್ಲಿ ಲಾಕ್ ಆಗಿದ್ದರು.