ಏಷ್ಯನ್‌ ಅಂಡರ್‌-23 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬಳ್ಳಾರಿಯ ಸುಧೀಕ್ಷಾಗೆ ಬೆಳ್ಳಿ ಪದಕ

KannadaprabhaNewsNetwork |  
Published : Jul 17, 2026, 02:00 AM IST
ಚೀನಾದ ಓರ್ಡೋಸ್‌ ನಗರದಲ್ಲಿ ನಡೆದ ಏಷ್ಯನ್‌ ಅಂಡರ್‌-23 ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌-2026ನಲ್ಲಿ ಮಹಿಳೆಯ 4*100 ಮೀಟರ್‌ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಬಳ್ಳಾರಿಯ ವಿ. ಸುಧೀಕ್ಷಾ ಅವರಿಗೆ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ. ರವಿಶಂಕರ್‌ ಸಜ್ಜಲ್‌ ಅವರು ₹20 ಸಾವಿರ ಚೆಕ್ ವಿತರಿಸಿದರು. | Kannada Prabha

ಸಾರಾಂಶ

ರಿಲೇ ಸ್ಪರ್ಧೆಯಲ್ಲಿ ಬಳ್ಳಾರಿಯ ವಿ. ಸುಧೀಕ್ಷಾ ಬೆಳ್ಳಿ ಪದಕ ಪಡೆಯುವ ಮೂಲಕ ಬಳ್ಳಾರಿಯ ಕೀರ್ತಿ ಹೆಚ್ಚಿಸಿದ್ದಾರೆ

ಬಳ್ಳಾರಿ: ಚೀನಾದ ಓರ್ಡೋಸ್‌ ನಗರದಲ್ಲಿ ನಡೆದ ಏಷ್ಯನ್‌ ಅಂಡರ್‌-23 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌-2026ನ ಮಹಿಳೆಯ 4*100 ಮೀಟರ್‌ ರಿಲೇ ಸ್ಪರ್ಧೆಯಲ್ಲಿ ಬಳ್ಳಾರಿಯ ವಿ. ಸುಧೀಕ್ಷಾ ಬೆಳ್ಳಿ ಪದಕ ಪಡೆಯುವ ಮೂಲಕ ಬಳ್ಳಾರಿಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ. ರವಿಶಂಕರ್‌ ಸಜ್ಜಲ್‌ ಹಾಗೂ ಬಳ್ಳಾರಿ ಸೈಕ್ಲಿಸ್ಟ್‌ ಆ್ಯಂಡ್‌ ರನ್ಸರ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಎನ್. ತಿಪ್ಪಾರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಸುಧೀಕ್ಷಾ ಅವರು ಅಂತಾರಾಷ್ಟ್ರೀಯ ಮಟ್ಟದ ತೈವಾನ್‌ ಒಪನ್‌ -2025ನಲ್ಲಿ ನಡೆದ 4*100 ಮೀ ರಿಲೇಯಲ್ಲಿ ಚಿನ್ನದ ಪದಕ, ದಕ್ಷಿಣ ಏಷ್ಯಾ ಯು20 -2024 ಚೆನ್ನೈನಲ್ಲಿ ನಡೆದ 4*100 ಮೀ ರಿಲೇಯಲ್ಲಿ ಚಿನ್ನದ ಪದಕ, 100 ಮೀ ಓಟದಲ್ಲಿ ಬೆಳ್ಳಿ ಪದಕ, ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ 1 ಮತ್ತು 3ರಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದರ ಹೊರತಾಗಿ ಜರ್ಮನಿಯಲ್ಲಿ ನಡೆದ ಎಫ್‌ಐಎಸ್‌ಯು ವಿಶ್ವವಿದ್ಯಾಲಯ ಕ್ರೀಡಾಕೂಟ-2025ರಲ್ಲಿ 4*100 ರಿಲೇಯಲ್ಲಿ 7ನೇ ಸ್ಥಾನ, ಲಿಮಾದಲ್ಲಿ ನಡೆದ 2024ರ ವಿಶ್ವ ಅಥ್ಲೆಟಿಕ್‌ ಯು-20ರಲ್ಲಿ, ಕೊರಿಯಾದ ಗುಮಿಯಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 4*100 ಮೀ ರಿಲೇದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ 2026ರಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಒಪನ್‌ 2025ರಲ್ಲಿ ಬೆಳ್ಳಿ ಪದಕ, ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಸ್ಪರ್ಧೆಯಲ್ಲಿ ಬೆಳ್ಳಿ, ಕೊಚ್ಚಿಯಲ್ಲಿ ರಾಷ್ಟ್ರೀಯ ಫೆಡರೇಶನ್‌ನಿಂದ ನಡೆದ ಸ್ಪರ್ಧೆಯಲ್ಲಿ 200 ಮೀ ಓಟದಲ್ಲಿ ಕಂಚಿನ ಪದಕ, ಭುವನೇಶ್ವರದಲ್ಲಿ 2024ರಲ್ಲಿ ನಡೆದ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 100 ಮೀ ಓಟದಲ್ಲಿ ಬೆಳ್ಳಿ, ಹಿರಿಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ಬೆಳ್ಳಿ ಪದಕ, ದಕ್ಷಿಣ ವಲಯ ಸ್ಪರ್ಧೆಯಲ್ಲಿ 200 ಮೀ ಓಟದಲ್ಲಿ ಕಂಚಿನ ಪದಕ ಪಡೆದು ತಮ್ಮ ಸಾಧನೆಯ ಓಟವನ್ನು ಮುಂದುವರಿಸಿದ್ದಾರೆ ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಸುಧೀಕ್ಷಾ ಮಾತನಾಡಿ, ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದ್ದು, ಬೆಂಗಳೂರು ವಿವಿಯಲ್ಲಿ ಬಿಕಾಂ ಓದುತ್ತಿರುವೆ. ಚಿಕ್ಕ ವಯಸ್ಸಿನಿಂದಲೂ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಕ್ರೀಡಾ ಸಾಧನೆಗೆ ತಾಯಿ ಲಲಿತಮ್ಮ ಅವರೇ ಪ್ರೇರಣೆಯಾಗಿದ್ದಾರೆ. 2028ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಕನಸಾಗಿದೆ. ನನ್ನ ಎಲ್ಲ ತರಬೇತುದಾರರ ಬೆಂಬಲ, ಸಹಕಾರದಿಂದ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.

ಇದೇ ವೇಳೆ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ. ರವಿಶಂಕರ್‌ ಸಜ್ಜಲ್‌ ಅವರು ಕ್ರೀಡಾಪಟು ಸುದೀಕ್ಷಾ ಅವರಿಗೆ ₹20 ಸಾವಿರಗಳ ಚೆಕ್ ನೀಡಿ ಪ್ರೋತ್ಸಾಹಿಸಿದರು. ಬಳ್ಳಾರಿ ಸೈಕ್ಲಿಸ್ಟ್‌ ಆ್ಯಂಡ್‌ ರನ್ಸರ್ಸ್ ಫೌಂಡೇಶನ್‌ನಿಂದ ₹50 ಸಾವಿರ ನೀಡುವುದಾಗಿ ಅಧ್ಯಕ್ಷ ಡಾ. ಎನ್. ತಿಪ್ಪಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ಎಸ್‌ಜೆವಿಎಂ ವಿಕ್ರಂ, ಕೃಷ್ಣರೆಡ್ಡಿ, ಸುಧೀಕ್ಷಾ ತಾಯಿ ಲಲಿತಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

ತಾಯಿ ಅಂಗನವಾಡಿ ಶಿಕ್ಷಕಿ, ತಂದೆ ಎಲೆಕ್ಟ್ರಿಷಿಯನ್‌...

ಕ್ರೀಡಾಪಟು ವಿ. ಸುಧೀಕ್ಷಾ ಅವರ ತಾಯಿ ಮೂಲತಃ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದವರಾಗಿದ್ದು, ಬಳ್ಳಾರಿಯ ನಿವಾಸಿ ಶ್ರೀಧರ್‌ ಅವರೊಂದಿಗೆ ವಿವಾಹವಾಗಿದ್ದಾರೆ. ಇವರು ಸದ್ಯ ನಗರದ ಪಟೇಲ್‌ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಶ್ರೀಧರ್‌ ಅವರು ಖಾಸಗಿ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ
ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ