ಹುಬ್ಬಳ್ಳಿ:
70-80 ವರ್ಷ ವಯಸ್ಸಾಗುತ್ತಿದ್ದಂತೆ ನಡೆಯಲು ಕಷ್ಟ ಪಡದವರೇ ಕಡಿಮೆ. ಆದರೆ, ಶತಾಯುಷಿಯ ಹಿಪ್ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿನ ದಾಜಿಬಾನಪೇಟೆಯಲ್ಲಿ ಇರುವ ಎಲುಬು ಕೀಲು ಮತ್ತು ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ತಜ್ಞ ಡಾ. ಭಾಸ್ಕರ್ ರಾವ್ ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿಯ ಶತಾಯುಷಿ, 101 ವರ್ಷದ ನಿವೃತ್ತ ಶಿಕ್ಷಕ ಇಮಾಮಸಾಬ್ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಬಿದ್ದ ತಕ್ಷಣ ಅವರಿಗೆ ನಡೆಯಲು ಹಾಗೂ ಕುಳಿತುಕೊಳ್ಳಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆತಂದು ಎಕ್ಸ್‌ರೇ ಪರೀಕ್ಷೆ ನಡೆಸಿದಾಗ ಎಡಭಾಗದ ಹಿಪ್ ಜಾಯಿಂಟ್ ಸಮೀಪ ಅಪರೂಪದ ರೀತಿಯ ಫ್ರಾಕ್ಚರ್ ಆಗಿರುವುದು ದೃಢಪಟ್ಟಿತ್ತು. ಜಂಟಿಯ ಕೊನೆಯ ಭಾಗದಲ್ಲಿ ಮುರಿತ ಆಗಿರುವುದರಿಂದ ಸ್ಕ್ರೂ ಅಥವಾ ಪ್ಲೇಟ್ ಅಳವಡಿಸಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ಇಂತಹ ವೇಳೆ ರೋಗಿ ಮತ್ತೆ ಸಹಜವಾಗಿ ನಡೆಯಬೇಕಾದರೆ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯೇ ಶಾಶ್ವತ ಪರಿಹಾರ ಎಂದು ವಿವರಿಸಿದರು.ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಸಿಮೆಂಟ್ ಬಳಕೆ, ಅನಸ್ತೇಶಿಯಾ ಹಾಗೂ ಇತರ ವೈದ್ಯಕೀಯ ಅಂಶಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಹೃದಯ ತಜ್ಞರು, ಫಿಸಿಷಿಯನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ರೋಗಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ದೇಶದಲ್ಲಿಯೇ ಅಪರೂಪದ ಮೊದಲ ಪ್ರಕರಣವಾಗಿದೆ ಎಂದರು.
ಹಿಪ್ ನೋವಿನಿಂದ ಮಾಡುವ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೂ, ಫ್ರ್ಯಾಕ್ಚರ್‌ನಿಂದ ಮಾಡುವ ಶಸ್ತ್ರಚಿಕಿತ್ಸೆಗೂ ವ್ಯತ್ಯಾಸವಿದೆ. ಈ ಪ್ರಕರಣದಲ್ಲಿ ಸಂಪೂರ್ಣ ಹಿಪ್ ಜಂಟಿಯನ್ನೇ ಬದಲಾಯಿಸಬೇಕಾಯಿತು. ಶಸ್ತ್ರಚಿಕಿತ್ಸೆಯಲ್ಲಿ ಕೋಬಾಲ್ಟ್- ಕ್ರೋಮಿಯಂ (Cobalt-Chromium) ಲೋಹದಿಂದ ತಯಾರಿಸಿದ ಕೃತಕ ಹಿಪ್ ಜಂಟಿಯನ್ನು ಅಳವಡಿಸಲಾಗಿದೆ. ಈ ಇಂಪ್ಲಾಂಟ್‌ಗಳು ಬಾಳಿಕೆ ಬರುವುದರ ಜತೆಗೆ ರೋಗಿಯ ಸಹಜ ಚಲನೆಯನ್ನು ಪುನಃ ಪಡೆಯಲು ನೆರವಾಗುತ್ತವೆ ಎಂದರು.