ಬಳ್ಳಾರಿ ವಿವಿ ನಕಲಿ ಘಟಿಕೋತ್ಸವ ಪ್ರಮಾಣಪತ್ರ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆ

KannadaprabhaNewsNetwork |  
Published : Jun 07, 2025, 01:39 AM IST
ಈ ವರದಿಗೆ ಫೋಟೋ ಬಳಸಿಕೊಳ್ಳುವುದು  | Kannada Prabha

ಸಾರಾಂಶ

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಪ್ರಕರಣದ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಪ್ರಕರಣದ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಕುರಿತು ಸಭೆಯಲ್ಲಿ ಹೆಚ್ಚು ಚರ್ಚಿತವಾಯಿತಲ್ಲದೆ, ಘಟನೆಯ ತೀವ್ರತೆ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರಿಗೆ ತನಿಖೆಗೆ ವಹಿಸಲು ನಿರ್ಣಯಿಸಲಾಯಿತು. ತನಿಖೆಯ ವರದಿಯನ್ನು 45 ದಿನಗಳೊಳಗೆ ಪಡೆಯಬೇಕು. ವರದಿಯನ್ನಾಧರಿಸಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಮುಂದಿನ ಹಂತದ ಕಾನೂನಾತ್ಮಕ ಕ್ರಮ ಜರುಗಿಸಲು ಸಭೆ ನಿರ್ಧರಿಸಿತು.

ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಪ್ರಕರಣ ಕುರಿತು ಕಳೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ನಿವೃತ್ತ ಕುಲಪತಿಗಳಿಂದ ತನಿಖೆ ಮಾಡಿಸುವ ಕುರಿತು ನಿರ್ಧರಿಸಲಾಗಿತ್ತು. ಆದರೆ, ಹಗರಣದ ತೀವ್ರತೆಯನ್ನು ಮನಗಂಡು ಕೋಟ್ಯಂತರ ರು. ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ನೀಡುವುದು ಸೂಕ್ತ ಎಂದು ಸಭೆ ನಿರ್ಧಾರಕ್ಕೆ ಬಂದಿದೆ.

ವಿವಿಯ ಹೊರಗುತ್ತಿಗೆ ನೌಕರರ ಪಿಎಫ್ ಹಣ ದುರ್ಬಳಕೆ ಪ್ರಕರಣ, ಪ್ರಸಾರಾಂಗ ವಿಭಾಗಕ್ಕೆ ಸಹಾಯಕ ನಿರ್ದೇಶಕರ ನೇಮಕ ಸೇರಿದಂತೆ ವಿಶ್ವವಿದ್ಯಾಲಯದ ಆಡಳಿತಾತ್ಮಕ ವಿಚಾರಗಳ ಕುರಿತು ಸಭೆ ಚರ್ಚಿಸಿದೆ. ಪ್ರಸಾರಾಂಗಕ್ಕೆ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದು ಪೂರ್ಣ ಪ್ರಮಾಣವಾಗಿ ಕಾರ್ಯನಿರ್ವಹಿಸುವವರನ್ನು ನೇಮಿಸಬೇಕು. ಈ ವಾರದೊಳಗೆ ಪ್ರಸಾರಾಂಗಕ್ಕೆ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ವಿವಿ ಸಿದ್ಧಪಡಿಸಿದ ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿನ ದೋಷ ಕುರಿತು ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಸಂಬಂಧಿಸಿದವರಿಗೆ ಶೋಕಾಸ್ ನೊಟೀಸ್ ನೀಡಲಾಗಿದೆ. ಅವರಿಂದ ಉತ್ತರವೂ ಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕುಲಪತಿ ಪ್ರೊ. ಮುನಿರಾಜು, ಕುಲಸಚಿವ ರುದ್ರೇಶ್ ಹಾಗೂ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ