ಸಂಶೋಧನೆಗಳ ಮೂಲಕ ಇತಿಹಾಸ ಗಟ್ಟಿಗೊಳಿಸುವ ಕಾರ್ಯವಾಗಲಿ: ಪ್ರೊ. ದೇವರಕೊಂಡಾರೆಡ್ಡಿ

KannadaprabhaNewsNetwork |  
Published : Jun 07, 2025, 01:37 AM IST
3ಎಚ್‌ವಿಆರ್4 | Kannada Prabha

ಸಾರಾಂಶ

ರಾಜ್ಯದ ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ಹಳೇ ಧಾರವಾಡ ಜಿಲ್ಲೆಯ ಕೊಡುಗೆ ಅಪಾರವಾದುದು. ಮಧ್ಯ ಕರ್ನಾಟಕ ಭಾಗವೆನಿಸಿರುವ ಹಾವೇರಿ ಜಿಲ್ಲೆ ತನ್ನ ಭೂಗರ್ಭದಲ್ಲಿ ಐತಿಹಾಸಿಕ ಕುರುಹುಗಳನ್ನು ಒಳಗೊಂಡಿದೆ.

ಹಾವೇರಿ: ಭಾರತ ಭೂಮಿಯಲ್ಲಿ ಅನೇಕ ಐತಿಹ್ಯಗಳು ಅಡಗಿವೆ. ಕಲೆ, ಸಂಸ್ಕೃತಿ, ಸಂಸ್ಕಾರ, ಪರಂಪರೆಗಳು ಇಲ್ಲಿನ ಮಣ್ಣಿನೊಟ್ಟಿಗೆ ಬೆರೆತಿವೆ. ಯುವ ಪೀಳಿಗೆ ಸಂಶೋಧನೆಗಳ ಮೂಲಕ ಇತಿಹಾಸವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಬೆಂಗಳೂರಿನ ಖ್ಯಾತ ಶಾಸನ ತಜ್ಞರು, ಸಂಸ್ಕೃತಿ ಚಿಂತಕ ಪ್ರೊ. ದೇವರಕೊಂಡಾರೆಡ್ಡಿ ಅಭಿಪ್ರಾಯಪಟ್ಟರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮತ್ತು ಶ್ರೀ ಅಭೇರಾಜ್ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ ಜಂಟಿಯಾಗಿ ಆಯೋಜಿಸಿದ್ದ ಅವಿಭಜಿತ ಧಾರವಾಡ ಜಿಲ್ಲೆಯ ಜೈನ ಮತ- ಪಂಥದ ಇತಿಹಾಸ- ಪುರಾತತ್ವ ಮತ್ತು ಸಂಸ್ಕೃತಿ: ಸಂಶೋಧನಾ ಸಾಧ್ಯತೆ ಮತ್ತು ಸವಾಲುಗಳು ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ಹಳೇ ಧಾರವಾಡ ಜಿಲ್ಲೆಯ ಕೊಡುಗೆ ಅಪಾರವಾದುದು. ಮಧ್ಯ ಕರ್ನಾಟಕ ಭಾಗವೆನಿಸಿರುವ ಹಾವೇರಿ ಜಿಲ್ಲೆ ತನ್ನ ಭೂಗರ್ಭದಲ್ಲಿ ಐತಿಹಾಸಿಕ ಕುರುಹುಗಳನ್ನು ಒಳಗೊಂಡಿದ್ದು, ಇಲ್ಲಿ ಜೈನ ಮತದ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಧರ್ಮಗಳ ಸಂಘರ್ಷದಿಂದ ಸಹಸ್ರಾರು ಸಂಖ್ಯೆಯ ಶಾಸನಗಳು ಭೂಮಿಯಲ್ಲಿ ಹುದುಗಿವೆ. ಇಲ್ಲಿನ ಇತಿಹಾಸಕಾರರು ಇವುಗಳ ಮೇಲೆ ಬೆಳಕು ಚೆಲ್ಲಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳ್ಳಿಯವರ ವಹಿಸಿದ್ದರು. ಹಂಪಿ ಕನ್ನಡ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ, ಧಾರವಾಡ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ ಕಿವುಡನವರ, ಐಕ್ಯುಎಸ್‌ಸಿ ಸಂಯೋಜಕಿ ಪ್ರೊ. ರೂಪಾ ಕೋರೆ ಇದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶಿವಯೋಗಿ ಆರ್. ಕೋರಿಶೆಟ್ಟರ ಸ್ವಾಗತಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ವಿಚಾರಸಂಕಿರಣದಲ್ಲಿ ವಿವಿಧ ಕಾಲೇಜುಗಳ ಸಂಶೋಧಕರು, ಸಾಹಿತಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಾಳೆಯಿಂದ ಹಲವೆಡೆ ವಿದ್ಯುತ್ ವ್ಯತ್ಯಯ

ರಾಣಿಬೆನ್ನೂರು: ತಾಲೂಕಿನ 110 ಕೆವಿ ಬೇಲೂರು ವಿದ್ಯುತ್ ಕೇಂದ್ರದ 11 ಕೆವಿ ಎಫ್- 1 ಕುದರಿಹಾಳ, ಎಫ್- 2 ಶಿಬಾರ ಮತ್ತು ಎಫ್- 5 ಎನ್‌ಜೆವೈ ಹೀಲದಹಳ್ಳಿ ಮಾರ್ಗಗಳ ಕಂಬಗಳ ಸ್ಥಳಾಂತರ ಕಾರ್ಯದ ಪ್ರಯುಕ್ತ ಜೂ. 8ರಿಂದ 15ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಎಫ್-5 ಎನ್‌ಜೆವೈ ಹೀಲದಹಳ್ಳಿ ವಿದ್ಯುತ್ ಮಾರ್ಗಕ್ಕೆ ಮತ್ತು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದರೆ ಎಫ್- 1 ಕುದರಿಹಾಳ, ಎಫ್-2 ಶಿಬಾರ ಕೃಷಿ/ನೀರಾವರಿ ಪಂಪ್‌ಸೆಟ್‌ಗಳ 11 ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ಹಿಂದಿನ ದಿನದ ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೆಸ್ಕಾಂ ಕಚೇರಿ ಪ್ರಕಟಣೆ ತಿಳಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ