ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ
ಸಾವಯವ ಮಾವು ಮತ್ತು ಹಲಸಿನ ಹಣ್ಣು, ಅಡುಗೆ ಮತ್ತು ಮೌಲ್ಯವರ್ಧಿತ ಪದಾರ್ಥಗಳನ್ನು ಗ್ರಾಹಕರಿಗೆ ಪರಿಚಯಿಸಲು ರೋಟರಿ ಕ್ಲಬ್ ಸಹಯೋಗದಲ್ಲಿ ಸಹಜ ಸಮೃದ್ಧ - ಸಾವಯವ ಕೃಷಿಕರ ಬಳಗವು ರೋಟರಿ ಕ್ಲಬ್ ಸಹಯೋಗದಲ್ಲಿ ಮೇಳ ಆಯೋಜಿಸಿದೆ.
ನಗರದ ಜೆಎಂವಿ ಮಹಿಳಾ ಕಾಲೇಜು ರಸ್ತೆಯಲ್ಲಿರುವ ಭಗಿನಿ ಮಂಡಳದಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಈ ಮೇಳ ಇರಲಿದೆ. ಜೂ. 8 ರಂದು ಬೆಳಗ್ಗೆ 11ಕ್ಕೆ ಮಕ್ಕಳಿಗಾಗಿ ಹಲಸಿನ ಚಿತ್ರಕಲಾ ಸ್ಪರ್ಧೆ ಮತ್ತು ಮಧ್ಯಾಹ್ನ 2 ಗಂಟೆಗೆ ಹಿರಿಯರಿಗಾಗಿ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಫರ್ಧೆ ಇರಲಿದೆ.ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು, ರೈತ ಮತ್ತು ಮಹಿಳಾ ಗುಂಪುಗಳು ಹಲಸು ಮತ್ತು ಮಾವಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದಾರೆ. ಮುಂಗಾರಿಗೆ ಬಿತ್ತಲು ದೇಸಿ ಬೀಜಗಳು ಸಿಗಲಿವೆ.
ಹಸಲು ಎಳೆಯ ಕಾಯಿಯಿಂದ ಬಿಡಿಸಿದ ತೊಳೆ ಹಿಡಿದು ಬೀಜದ ವರೆಗೆ ತಿನ್ನಲು ಬರುವ ಕಲ್ಪವೃಕ್ಷ. ಹಲಸಿನ ಕಾಯಿಯ ನಿರಂತರ ಸೇವನೆಯಿಂದ ಮಧುಮೇಹ, ಕ್ಯಾನ್ಸರ್ ಮತ್ತು ಮಲಬದ್ಧತೆಯನ್ನು ದೂರವಿಡಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಲಸು ಮೇಳದ ಪ್ರಮುಖ ಆಕರ್ಷಣೆಯಾಗಲಿದೆ.
ಕರ್ನಾಟಕದ ವಿವಿಧ ಭಾಗಗಳಿಂದ ಸಾವಯವ ಮಾವು ಮತ್ತು ಹಲಸಿನ ಬೆಳೆಗಾರರು ವೈವಿಧ್ಯಮಯ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ. ಹಲಸಿನ ಮಹತ್ವ ಸಾರುವ ಈ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ವಿಶೇಷವಾಗಿ ಕೆಂಪು ಚಂದ್ರ ಹಲಸು ತಿನ್ನಲು ಸಿಗಲಿದೆ. ಮನೆಗೂ ಇದನ್ನು ಕೊಂಡೊಯ್ಯಬಹುದು.ಏನೇನು ಇರಲಿದೆ:
ಹಲಸಿನ ಚಿಪ್ಸ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯಂಥ ರುಚಿಕರ ಆಹಾರ ಮಳಿಗೆ ಮೇಳದಲ್ಲಿ ಇರಲಿವೆ. ಇಮಾಂ ಪಸಂದ್, ದಶೇರಿ, ಅಲ್ಫಾನ್ಸೋ, ಮಲ್ಲಿಕಾ, ಬೇನಿಷಾನ್, ತೋತಾಪುರಿ ಮೊದಲಾದ ತಳಿಗಳ ಮಾವಿನ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.ಮಳಲಿಯ ಮಹಿಳಾ ಸಂಘದವರು ಹಲಸು, ಮಾವು ಮತ್ತು ಇತರೆ ಅಪರೂಪದ ಮತ್ತು ಗುಣಮಟ್ಟದ ಹಣ್ಣಿನ ಸಸಿಗಳನ್ನು ಮಾರಾಟಕ್ಕೆ ತರಲಿದ್ದಾರೆ.
ಬಯಲುಸೀಮೆ ಭಾಗದಲ್ಲಿ ಮಳೆ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ನೀರಿನ ಸಮಸ್ಯೆಯಿಂದ ಬಳಲುತ್ತಿರುವ ರೈತರು ತೋಟಗಾರಿಕೆಯತ್ತ ಮುಖ ಮಾಡಬೇಕಿದೆ. ಮೂರು ವರ್ಷ ತೋಟಗಾರಿಕೆ ಬೆಳೆ ಸಲುಹಿದರೆ ಅದು ನಮ್ಮನ್ನು ಜೀವನ ಪರ್ಯಂತ ಸಲಹುತ್ತದೆ. ಹೀಗಾಗಿ, ರೈತರಿಗೆ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಸಹಸ ಸಮೃದ್ಧ ಸಂಸ್ಥೆ ಮಾಡುತ್ತಿದೆ ಎನ್ನುತ್ತಾರೆ ಆಯೋಜಕರು.ಕಳೆದ ಬಾರಿ ಮಾಡಿದಾಗ ಹಲಸಿನ ಮೇಳಕ್ಕೆ ವ್ಯಾಪಕ ಸ್ಪಂದನೆ ದೊರೆತ್ತಿತು. 5 ಸಾವಿರ ಜನ ಮೇಳಕ್ಕೆ ಭೇಟಿ ನೀಡಿದ್ದರು. ಸುಮಾರು ₹12 ಲಕ್ಷ ವಹಿವಾಟು ಆಗಿತ್ತು. ಈ ಬಾರಿ ಮಾವು ಮತ್ತು ಹಲಸಿನ ಮೇಳ ಆಯೋಜಿಸಿರುವುದರಿಂದ 7 ರಿಂದ 8 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು, ₹15ರಿಂದ ₹20 ಲಕ್ಷ ವಹಿವಾಟು ನಿರೀಕ್ಷಿಸಲಾಗಿದೆ ಎಂದು ಸಹಜ ಸಮೃದ್ಧ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಶಾಂತಕುಮಾರ ಸಿ ಹೇಳಿದರು.