ದಾವಣಗೆರೆ : ಕರ್ನಾಟಕದಲ್ಲಿ ಎಂಇಎಸ್‌ ನಿಷೇಧಿಸಿ, ಗಡಿ ಜಿಲ್ಲೆಗಳಲ್ಲಿ ಕನ್ನಡಿಗರ ರಕ್ಷಿಸಿ

KannadaprabhaNewsNetwork | Updated : Mar 21 2025, 12:24 PM IST

ಸಾರಾಂಶ

  ಗಡಿನಾಡಿನಲ್ಲಿ   ನಾಗರೀಕರ ಮೇಲಾಗುತ್ತಿರುವ ಹಲ್ಲೆ, ಅಮಾನುಷ ‍ವರ್ತನೆ ತೋರುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಉದ್ಧಟತನ ಹತ್ತಿಕ್ಕುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ನಮ್ಮ ಜೈ ಕರುನಾಡ ವೇದಿಕೆ, ಕರ್ನಾಟಕ ಜನಮನ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಸಾಂಕೇತಿಕ ಧರಣಿ ನಡೆಸಲಾಯಿತು.

 ದಾವಣಗೆರೆ : ಗಡಿ ಜಿಲ್ಲೆಗಳಲ್ಲಿ ಕನ್ನಡಿಗರ ಮೇಲಾಗುತ್ತಿರುವ ದಬ್ಬಾಳಿಕೆ, ಗಡಿನಾಡಿನಲ್ಲಿ ಸಂಚರಿಸುವ ವಾಹನ, ಚಾಲಕರು, ನಿರ್ವಾಹಕರು, ನಾಗರೀಕರ ಮೇಲಾಗುತ್ತಿರುವ ಹಲ್ಲೆ, ಅಮಾನುಷ ‍ವರ್ತನೆ ತೋರುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಉದ್ಧಟತನ ಹತ್ತಿಕ್ಕುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ನಮ್ಮ ಜೈ ಕರುನಾಡ ವೇದಿಕೆ, ಕರ್ನಾಟಕ ಜನಮನ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಸಾಂಕೇತಿಕ ಧರಣಿ ನಡೆಸಲಾಯಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಾಗೇಂದ್ರ ಬಂಡೀಕರ್‌, ಟಿ.ಮಂಜುನಾಥ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಇಎಸ್ ಮತ್ತು ಸಂಘಟನೆಯ ಪುಂಡರ ವಿರುದ್ಧ ಉಭಯ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಗೇಂದ್ರ ಬಂಡೀಕರ್ ಮಾತನಾಡಿ, ಪದೇಪದೇ ಗಡಿ ಪ್ರದೇಶಗಳಲ್ಲಿ ತಕರಾರು ಮಾಡುತ್ತಿರುವ ಎಂಇಎಸ್‌ ಪುಂಡಾಟ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲ ಗಡಿ ಭಾಗಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕವಾಗಿ ಪ್ರಗತಿ ಸಾಧಿಸಲು ರಾಜ್ಯ ಸರ್ಕಾರವು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಗಡಿನಾಡ ಕನ್ನಡಿಗರ ಆತ್ಮಗೌರವ ಮತ್ತು ಭಾಷಾಭಿಮಾನ ಕಾಪಾಡಲು ಸರ್ಕಾರ ಬದ್ಧವಾಗಿರಬೇಕು, ಅಂತರ ರಾಜ್ಯ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಂಇಎಸ್‌ ಉದ್ಧಟತನದ ವರ್ತನೆ, ಪುಂಡಾಟ ಹತ್ತಿಕ್ಕಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ- ಮಹಾರಾಷ್ಟ್ರ ರಾಜತಾಂತ್ರಿಕ ಸೌಹಾರ್ದತೆ ಹಾಗೂ ಜನಜೀವನ ಅಸ್ತವ್ಯಸ್ತಗೊಳಿಸುವ ಎಂಇಎಸ್‌ ಅನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸಬೇಕು. ರಾಜ್ಯದಲ್ಲಿ ಎಂಇಎಸ್‌ ಯಾವುದೇ ರೀತಿ ಚಟುವಟಿಕೆಯಲ್ಲಿ ತೊಡಗದಂತೆ ನಿಷೇಧ, ನಿರ್ಬಂಧ ಹೇರಬೇಕು. ಗಡಿ ಪ್ರದೇಶಗಳ ಅಭಿವೃದ್ಧಿಯ ಅಸಮತೋಲನ ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳಗಾವಿ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯತ್ತ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಪ್ರವಾಸೋದ್ಯಮ, ಸಾರಿಗೆ, ವಾಣಿಜ್ಯ ವಹಿವಾಟು ಗಡಿಭಾಗಗಳಲ್ಲಿ ಸುಗಮವಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುವ ಮೂಲಕ ಆಗಾಗ್ಗೆ ಎಂಇಎಸ್ ನಡೆಸುವ ದೌರ್ಜನ್ಯ ತಡೆಗಟ್ಟಲು ಕಠಿಣ ಕಾನೂನು ಕ್ರಮ ಜರುಗಿಸಬೇಕು ಸರ್ಕಾರಕ್ಕೆ ಒತ್ತಾಯಿಸಲಾಯಿತು.

ನಾಗೇಂದ್ರ ಬಂಡೀಕರ್‌, ಟಿ.ಮಂಜುನಾಥ ಗೌಡ ನೇತೃತ್ವದಲ್ಲಿ ಬೇಡಿಕೆಗಳ ಮನವಿಯನ್ನು ಉಪವಿಭಾಗಾಧಿಕಾರಿ ಮುಖೇನ ಸರ್ಕಾರಕ್ಕೆ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಉಭಯ ಸಂಘಟನೆಗಳ ಕಂಚಿಕೇರಿ ನಾಗರಾಜ, ಬಿ.ಎಸ್.ಪ್ರವೀಣ ಪಲ್ಲೇದ, ನಿಂಗಪ್ಪ, ಎನ್.ರಾಜೇಂದ್ರ ಬಂಗೇರಾ, ಜಿ.ಬಿ.ಲೋಕೇಶ, ಸಾಯಿ ಇತರರು ಇದ್ದರು. 

Share this article