ಮಾತಿಗೆ ಮೌನದ ಆಪ್ತ ಸಾಂಗತ್ಯ: ಲಕ್ಷ್ಮೀಶ ತೋಳ್ಪಾಡಿ

KannadaprabhaNewsNetwork |  
Published : Mar 21, 2025, 12:36 AM IST
ಕಟೀಲು ಕಾಲೇಜಿನಲ್ಲಿ ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯ ಗೋಷ್ಟಿ. | Kannada Prabha

ಸಾರಾಂಶ

ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿ, ಶ್ರೀ ಕಟೀಲು ದೇವಳ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳಗಳ ಸಹಯೋಗದಲ್ಲಿ ನಡೆಯುತ್ತಿರುವ ಎರಡು ದಿನಗಳ ತಾಳಮದ್ದಲೆ ಕಮ್ಮಟದ ವಿಚಾರಗೋಷ್ಠಿಯಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೌನದ ಸಾಂಗತ್ಯ ಮಾತಿಗೆ ಬಹಳ ಇದೆ. ಮೌನ ಇದ್ದಾಗ ಮಾತನ್ನು ಪ್ರೀತಿಸಬೇಕು. ಇದು ಮಾತೇ ಪ್ರಧಾನವಾಗಿರುವ ತಾಳಮದ್ದಲೆಯ ಕಲಾವಿದರಿಗೆ ತಿಳಿದಿರಬೇಕೆಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.

ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿ, ಶ್ರೀ ಕಟೀಲು ದೇವಳ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳಗಳ ಸಹಯೋಗದಲ್ಲಿ ನಡೆಯುತ್ತಿರುವ ಎರಡು ದಿನಗಳ ತಾಳಮದ್ದಲೆ ಕಮ್ಮಟದ ವಿಚಾರಗೋಷ್ಠಿ ‘ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೊಗಳಿದರೆ ತೆಗಳಿದಂತೆ, ತೆಗಳಿದರೆ ಹೊಗಳಿದಂತೆ ಕಾಣುವಂತೆ ಮಾಡುವ, ವಿರೋಧವನ್ನೂ ಅವಿರೋಧವನ್ನೂ ಒಟ್ಟಿಗೆ ಕಾಣುವ ಸಾಧ್ಯತೆ ಮಾತಿಗೆ ಇದೆ. ದೇವರು ಸರ್ವ ವ್ಯಾಪಿ ಎಂದರೆ ಎಲ್ಲ ಕಡೆ ಇದ್ದಾನೆ ಎಂದೇ ಅರ್ಥ. ಪೂಜಿಸುವಲ್ಲಿ, ವಿರೋಧಿಸುವಲ್ಲೂ ಇದ್ದಾನೆ ಎಂದರ್ಥ. ಕಲೆಯಲ್ಲೂ ಹಾಗೆಯೇ. ದೇವರನ್ನು ಸಮನ್ವಯ ಸೂತ್ರವಾಗಿ ಅರ್ಥೈಸಬೇಕು ಎಂದರು.

ಸಾಹಿತಿ ಶ್ರೀಧರ ಡಿ.ಎಸ್. ಮಾತನಾಡಿ ಮಾತು ಕಲೆಯಾಗಿ ರೂಪುಗೊಳ್ಳುವ ತಾಳಮದ್ದಲೆಯಲ್ಲಿ ಚಾಪೆಯಲ್ಲಿ ಕೂತು ಮಾತಾಡುತ್ತ ತನ್ನನ್ನೇ ಮರೆತು ರಾಮ, ರಾವಣ, ಭೀಮ, ಹೀಗೆ ಪಾತ್ರಗಳು ದೇವತೆ, ರಕ್ಕಸನಾಗುವುದನ್ನೂ ಪ್ರೇಕ್ಷಕರೂ ಅನುಭವಿಸುತ್ತಾರೆ. ಮಾತಿನಲ್ಲೇ ಪುರಾಣ ಕಟ್ಟುವ ತನ್ನನ್ನೇ ಮರೆಯುವ ಪ್ರಕ್ರಿಯೆ ಇಲ್ಲಿ ಆಗುತ್ತದೆ ಎಂದರು.

ಕಲಾವಿದ ಗಣರಾಜ ಕುಂಬ್ಳೆ ಮಾತನಾಡಿ ರಾವಣ, ಅತಿಕಾಯ, ರಕ್ತಬೀಜ, ಶುಂಭ, ಕರ್ಣ ಪಾತ್ರಗಳಲ್ಲಿ ವಿರೋಧ ಭಕ್ತಿಯನ್ನು ಕಾಣುತ್ತೇವೆ. ದೇವರನ್ನು ವಿರೋಧಿಸುವುದು ಮತ್ತು ಸಮರ್ಥಿಸುವುದು ಇವುಗಳನ್ನು ಸಮನ್ವಯಗೊಳಿಸಿ ಅರ್ಥ ಹೇಳುವುದು ತಾಳಮದ್ದಲೆಯ ಯಶಸ್ಸು. ತಾತ್ವಿಕವಾದ ವಿರೋಧ, ಮೌಲ್ಯಗಳ ಜಿದ್ದಾಜಿದ್ದಿ ಪ್ರೇಕ್ಷಕರಿಗೆ ಖುಷಿ ಆಗುತ್ತದೆ ಎಂದರು.

ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿ, ದೇವರಲ್ಲಿ ಇರುವಂತೆ ಕಲಾವಿದರಲ್ಲೂ ವಿರೋಧ ಭಕ್ತಿಯನ್ನು ಕಾಣಬಹುದು. ಒಳಗೆ ಪ್ರೀತಿ ಭಕ್ತಿ ಇದ್ದರೆ ವೇದಿಕೆಯಲ್ಲಿ ಪಾತ್ರವಾಗಿ ವಿರೋಧಿಸುತ್ತಾರೆ. ರಂಗ ಧರ್ಮ ಅನುಸಾರವಾಗಿ ಭೀಷ್ಮ ಪ್ರಸಂಗದಲ್ಲಿ ಬರುವ ಬ್ರಾಹ್ಮಣ ಪಾತ್ರ ರಂಗಕ್ಕೆ ಸರಿ. ಬ್ರಾಹ್ಮಣ ಪಾತ್ರವೇ ಮುಖ್ಯವಾಗಿ ಭೀಷ್ಮನ ಪಾತ್ರ ಸಣ್ಣದಾಗಬಾರದಲ್ಲವೆ. ಪಾತ್ರಗಳ ತಿಳಿವಳಿಕೆ ಬೇಕು. ಒಟ್ಟಂದದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ತಿಳಿಸುವುದು. ಕೆಟ್ಟದು ನಾಶ ಆಗುತ್ತದೆ ಒಳ್ಳೆಯದು ಉಳಿಯುತ್ತದೆ ಎಂಬುದನ್ನು ತಿಳಿಸುವ ತಾಳಮದ್ದಲೆಯಲ್ಲಿ ಪ್ರಸಂಗದ ಕೊನೆಗೆ ಪಾತ್ರ ಹಾಳಾಗಿ ಸಂದೇಶವನ್ನೂ ತಲುಪಿಸದೆ ಹೋದರೆ ಸರಿಯಲ್ಲ ಎಂದರು.

ಕಲಾವಿದ ವಾಸುದೇವರಂಗಾ ಭಟ್ ನಿರೂಪಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?