ಬಲಮುರಿಯಲ್ಲಿ ನದಿಗೆ ಇಳಿಯುವುದಕ್ಕೆ ನಿಷೇಧ: ಡಾ.ಕುಮಾರ

KannadaprabhaNewsNetwork |  
Published : May 27, 2026, 02:15 AM IST
25ಕೆಎಂಎನ್‌ಡಿ-5ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಪ್ರವಾಸಿ ತಾಣಗಳಲ್ಲಿ ಕಾವೇರಿ ನದಿಗೆ ಇಳಿದು ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಸಭೆ ನಡೆಸಿದರು. | Kannada Prabha

ಸಾರಾಂಶ

ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ತಾಲೂಕು ತಹಸೀಲ್ದಾರ್ ಹಾಗೂ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ ಸಮಿತಿ ರಚಿಸಲಾಗಿದೆ. ಎಚ್ಚರಿಕೆ ಫಲಕಗಳ ಅಳವಡಿಕೆ, ನದಿಯ ನೀರಿನ ತೀವ್ರತೆ ಹಾಗೂ ನೀರಿನ ಆಳದ ಅರಿವಿಲ್ಲದೆ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನದಿ ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರವಾಸಿ ತಾಣಗಳಲ್ಲಿ ಕಾವೇರಿ ನದಿಗೆ ಇಳಿದು ಹಲವರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಸಭೆ ನಡೆಸಿ ಮಾತನಾಡಿದರು.

ಬಲಮುರಿ ಮತ್ತು ಸುತ್ತಮುತ್ತಲಿನ ಅಪಾಯಕಾರಿ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿಗೆ ಇಳಿಯುವುದು ಮತ್ತು ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸುರಕ್ಷತೆ ಇಲ್ಲದ ತೆಪ್ಪ ಬಳಸುವುದನ್ನೂ ನಿಷೇಧಿಸಿರುವುದಾಗಿ ಹೇಳಿದರು.

ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ತಾಲೂಕು ತಹಸೀಲ್ದಾರ್ ಹಾಗೂ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ ಸಮಿತಿ ರಚಿಸಲಾಗಿದೆ. ಎಚ್ಚರಿಕೆ ಫಲಕಗಳ ಅಳವಡಿಕೆ, ನದಿಯ ನೀರಿನ ತೀವ್ರತೆ ಹಾಗೂ ನೀರಿನ ಆಳದ ಅರಿವಿಲ್ಲದೆ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿರುವುದರಿಂದ, ನದಿ ಪಾತ್ರದ ಅಪಾಯಕಾರಿ ವಲಯಗಳಲ್ಲಿ ದೊಡ್ಡದಾದ ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಪ್ರವಾಸಿಗರಿಗೆ ಸುರಕ್ಷಿತ ಸ್ಧಳ ಹಾಗೂ ಅಪಾಯಕಾರಿ ಸ್ಥಳಗಳ ಬಗ್ಗೆ ಮಾರ್ಗದರ್ಶನ ನೀಡಲು ಹೋಂ ಗಾರ್ಡ್‌ಗಳನ್ನು ನೇಮಕ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಸಿ, ಧ್ವನಿ ವರ್ಧಕ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡಬೇಕು. ನದಿಯ ಆಳ ಹಾಗೂ ಸುಳಿಗಳಿರುವ ಅಪಾಯಕಾರಿ ಜಾಗಗಳ ಬಳಿ ಯಾರಾದರೂ ಪ್ರವಾಸಿಗರು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸ್ಥಳೀಯ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ವೆಂಕಟರಮಣಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಧಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತ್ಯೇಕ ಹೋರಾಟ ವೇದಿಕೆಯಲ್ಲಿ ಕ್ರೆಡಿಟ್‌ ವಾರ್‌
ಷರತ್ತುಗಳೊಂದಿಗೆ ಪ್ರತ್ಯೇಕ ಪಾಲಿಕೆಗೆ ರಾಜ್ಯಪಾಲರ ಮುದ್ರೆ