- ಜನ ದಂಗೆ ಏಳಬೇಕು, ಮೋದಿ ರಾಜೀನಾಮೆ ಕೊಡುವಂತಾಗಲೆಂದು ಕಾಂಗ್ರೆಸ್ ಪ್ರಚೋದನೆ: ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬೇಕು, ಸರ್ಕಾರದ ವಿರುದ್ಧ ಧಂಗೆ ಏಳಬೇಕು, ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಲೆಂದು ದುರುದ್ದೇಶದಿಂದ ಕಾಂಗ್ರೆಸ್ ಮತ್ತಿತರೆ ಪಕ್ಷಗಳು ಪ್ರಚೋದನೆ ನೀಡಿರುವುದೇ ದೆಹಲಿ ಘಟನೆಗೆ ಕಾರಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸಿಬಿಐಗೆ ಒಪ್ಪಿಸಿದ್ದು, 12 ಜನರ ಬಂಧನವೂ ಆಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಇಲ್ಲವೆಂದು ಮೋದಿ ಹೇಳಿದ್ದಾರೆ. ಮೋದಿ ಜನಪ್ರಿಯತೆ ಸಹಿಸಲಾಗದ ಕಾಂಗ್ರೆಸ್ ನಾಯಕರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಪ್ರಶ್ನೆಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ದೆಹಲಿ ಹೋರಾಟದ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೀಡಿದ ಪ್ರಚೋದನೆಯೇ ಕಾರಣ. ಜಿರಲೆ ಪಕ್ಷದವರು ಹೋರಾಟ ನಡೆಸಿದ್ದು, ಅದಕ್ಕೆ ಕಾಂಗ್ರೆಸ್ ಪ್ರಚೋದನೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಜೆ.ಪಿ.ನಡ್ಡಾ ಈಗಾಗಲೇ ಹೋರಾಟನಿರತರ ಜೊತೆ ಚರ್ಚೆ ಸಹ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್‌ರ ಯಾವುದೇ ಪಾತ್ರವೂ ಇಲ್ಲ. ದೆಹಲಿ ಹೋರಾಟಕ್ಕೆ ವಿದೇಶಿ ಫಂಡಿಂಗ್ ಆಗಿದೆ. ಇದು ನಕಲಿ ಹೋರಾಟವಾಗಿದೆ. ಹಿಂಸಾಚರಕ್ಕೆ ಜನರನ್ನ ಪ್ರಚೋದನೆ ನೀಡಿದವರೇ ಕಾಂಗ್ರೆಸ್ ನಾಯಕರು ಎಂದು ದೂರಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ, ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾವಿದ್ದಾಗಲೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಆಗ ಕಾಂಗ್ರೆಸ್ಸಿನ ಯಾವ ಪ್ರಧಾನಿ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು? ಕಾಂಗ್ರೆಸ್ಸಿನ ಕುಮ್ಮಕ್ಕಿನಿಂದಲೇ 150ಕ್ಕೂ ಹೆಚ್ಚು ಪುರುಷ- ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಏಟು ಬಿದ್ಧಿವೆ. ಬಹಳಷ್ಟು ಅನಾಹುತವೂ ಆಗಿದೆ. ಬಾಂಗ್ಲಾ, ನೇಪಾಳದಲ್ಲಿ ಅರಾಜಕತೆ ಸೃಷ್ಟಿಯಾದಂತೆ ಇಲ್ಲಿಯೂ ಆಗಲೆಂಬ ಲೆಕ್ಕಾಚಾರ ಕಾಂಗ್ರೆಸ್ಸಿನದ್ದು. ಆದರೆ, ದೇಶದ ಜನತೆ ಅಂತಹದ್ದನ್ನು ಒಪ್ಪುವುದಿಲ್ಲ. ನಕಲಿ ಗಾಂಧಿಗಳು, ನಕಲಿ ಹೋರಾಟಗಾರರ ಇಂತಹ ಕೃತ್ಯವನ್ನು ಖಂಡಿಸುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.
ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ಕೆ.ಎನ್.ವೆಂಕಟೇಶ, ದಯಾನಂದ, ರವಿಗೌಡ, ಅಜಯಕುಮಾರ, ಚೇತನ್ ಇತರರು ಇದ್ದರು.- - -
(ಬಾಕ್ಸ್)* ಬರ ಆವರಿಸಿದ್ದರೂ ಪ್ರವಾಸ ಮಾಡದ ಸಿಎಂ, ಡಿಸಿಎಂ
- ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತಕ್ಕೆ ರೇಣುಕಾಚಾರ್ಯ ಆಕ್ರೋಶದಾವಣಗೆರೆ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಯಾರೊಬ್ಬರೂ ವಿವಿಧ ಜಿಲ್ಲೆಗೆ ಭೇಟಿ ಮಾಡಿಲ್ಲ. ಸಂಪುಟ ವಿಸ್ತರಣೆಗೆ ದೆಹಲಿಗೆ ಹೋಗಿ ಬರುವ ಸರ್ಕಸ್‌ಗಷ್ಟೇ ಕಾಂಗ್ರೆಸ್ ಸರ್ಕಾರ ಸೀಮಿತವಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಬಿಜೆಪಿ ಶಾಸಕರು, ಮುಖಂಡರ ಮೇಲೆ ಕಾಂಗ್ರೆಸ್ಸಿಗರು ದೌರ್ಜನ್ಯ ಎಸಗಿದ್ದು ಅಕ್ಷಮ್ಯ. ಶಾಸಕರ ಮೇಲೆ ಮೊಟ್ಟೆ ಎಸೆದು, ಅವಾಚ್ಯವಾಗಿ ನಿಂದಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಪಕ್ಷದಲ್ಲಿ ನಾವ್ಯಾರೂ ವೈರಿಗಳಲ್ಲ. ನಾವೆಲ್ಲರೂ ಒಂದೇ. ನಮ್ಮಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಬಿಜೆಪಿ ಜಿಲ್ಲಾ ಅಧ್ಯಕ್ಷರು, ಸಮಿತಿ ಬದಲಾವಣೆ ವಿಚಾರ ನನ್ನ ಗಮನಕ್ಕೂ ಬಂದಿಲ್ಲ. ನೂತನ ಪದಾಧಿಕಾರಿಗಳು ಒಂದು ಗುಂಪಿನವರೂ ಅಲ್ಲ. ಬಿಜೆಪಿ ಭಿನ್ನಮತದ ತವರೆಂದು ಮಾಧ್ಯಮಗಳು ಸುದ್ದಿ ಮಾಡಿವೆ. ಅಂತಹ ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.- - -
(ಟಾಪ್ ಕೋಟ್) ಭದ್ರಾ ಡ್ಯಾಂ ಗೇಟ್ ತೆಗೆದು ರಾತ್ರೋರಾತ್ರಿ ನೀರು ಹರಿಸಿದ ಮುಖ್ಯ ಅಭಿಯಂತರರನ್ನು ತಕ್ಷಣ ಅಮಾನತುಪಡಿಸಬೇಕು, ಅಲ್ಲದೇ ಸೇವೆಯಿಂದಲೇ ವಜಾ ಮಾಡಬೇಕು. ಮೇಲ್ದಂಡೆಯ ಕೆರೆ, ಕಟ್ಟೆಗಳನ್ನು ತುಂಬಿಸಲು ಭದ್ರಾ ಡ್ಯಾಂನಲ್ಲಿ ನೀರು ಇಲ್ಲದಿದ್ದಾಗಲೇ ಹರಿಸುತ್ತಿರುವುದು ಸರಿಯಲ್ಲ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹರಪನಹಳ್ಳಿ ಭಾಗದ ಅಚ್ಚುಕಟ್ಟು ರೈತರನ್ನು ಬಲಿ ಕೊಡಲು ಮುಂದಾದ ಮುಖ್ಯ ಅಭಿಯಂತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.
- - - -23ಕೆಡಿವಿಜಿ3: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.