ಕನ್ನಡಪ್ರಭ ವಾರ್ತೆ ಬೀಳಗಿಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬಿತ್ತಿದ ಬೆಳೆಗಳನ್ನು ರಕ್ಷಿಸಲು ಸಮಯಕ್ಕೆ ಸರಿಯಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಎನ್‌ಟಿಪಿಸಿ, ಸಕ್ಕರೆ ಕಾರ್ಖಾನೆಗಳು, ವಿಂಡ್‌ ಪವರ್ ಹಾಗೂ ಸೋಲಾರ್ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಸೂಕ್ತ ವ್ಯವಸ್ಥೆಯ ಮೂಲಕ ಗ್ರಿಡ್‌ಗೆ ಪಡೆದು, ಜಿಲ್ಲೆಯ ಕೃಷಿ ಪಂಪ್‌ಸೆಟ್‌ಗಳಿಗೆ ಆದ್ಯತೆಯ ಮೇರೆಗೆ ಪೂರೈಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಸರ್ಕಾರವನ್ನು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಆಡಳಿತ ಸೌಧಕ್ಕೆ ಆಗಮಿಸಿ, ಗ್ರೇಡ್-2 ತಹಶೀಲ್ದಾರ್ ಸಂಗಮೇಶ ಚರಂತಿಮಠ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಬೂಕೆ ಅವರ ಮೂಲಕ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಕೃಷಿ ವಿದ್ಯುತ್ ಸಮಸ್ಯೆ ನಿವಾರಣೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಆರ್‌ಟಿಪಿಎಸ್, ಬಿಟಿಪಿಎಸ್ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನಾ ಸಮಸ್ಯೆ ಎದುರಾದಲ್ಲಿ ಪರ್ಯಾಯ ಮೂಲಗಳಿಂದ ವಿದ್ಯುತ್ ಖರೀದಿಸಿ, ಕೃಷಿ ಬಳಕೆಗೆ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೃಷಿ ವಿದ್ಯುತ್ ಪೂರೈಕೆಯಲ್ಲಿ ಲೋಡ್‌ಶೆಡ್ಡಿಂಗ್ ಅಥವಾ ವ್ಯತ್ಯಯ ಉಂಟಾದರೆ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಅಲ್ಲದೆ, ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಆಗುವುದನ್ನು ಖಚಿತಪಡಿಸಬೇಕು ಎಂದು ಹಿರೇಮಠ ಆಗ್ರಹಿಸಿದರು.ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, ಫೀಡರ್‌ಗಳು, ವಿದ್ಯುತ್ ಪರಿವರ್ತಕಗಳು, ಕಂಬಗಳು ಹಾಗೂ ತಂತಿಗಳಲ್ಲಿ ಉಂಟಾಗುವ ದೋಷಗಳನ್ನು ತುರ್ತುಗತಿಯಲ್ಲಿ ದುರಸ್ತಿ ಮಾಡಬೇಕು. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಗೆ ವಿಶೇಷ ಕೃಷಿ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಕೊರತೆ ಅಥವಾ ತಾಂತ್ರಿಕ ಕಾರಣಗಳನ್ನು ನೆಪ ಮಾಡಿಕೊಂಡು ಕೃಷಿ ವಿದ್ಯುತ್ ಪೂರೈಕೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗೋಪಾಲ ಕಮ್ಮನ್ನವರ, ಸಂಗನಗೌಡ ಪಾಟೀಲ, ಅಬ್ದುಲ್ ಹಲವಾಯಿ, ಜಂಗಪ್ಪ ಕಲ್ಲಾರಿ, ಡೋಂಗ್ರಿಸಾಬ ನದಾಫ್, ಹಣಮಂತ ದೊರೆಗೊಳ, ಅಜಿತ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈಗಾಗಲೇ ಬಿತ್ತನೆ ಮಾಡಿರುವ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ತಕ್ಷಣ ವಿಶೇಷ ವಿದ್ಯುತ್ ಪೂರೈಕೆ ಮಾಡಬೇಕು. ರೈತರಿಗೆ ಬೆಳೆಗಳಿಗೆ ನೀರು ಹಾಯಿಸಲು ಅನುಕೂಲ ಕಲ್ಪಿಸಬೇಕು. ಮೂರು ದಿನಗಳ ಗಡುವಿನೊಳಗೆ ಕೃಷಿ ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸದಿದ್ದರೆ, ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರನ್ನು ಸಂಘಟಿಸಿ ಕಾತರಕಿ ಹಾಗೂ ಬೀಳಗಿ ವಿದ್ಯುತ್ ಸ್ಟೇಷನ್‌ಗಳಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು.-ಮಲ್ಲಪ್ಪ ಗಾಣಿಗೇರ, ತಾಲೂಕು ಅಧ್ಯಕ್ಷರು, ಬಿ.ಕೆ.ಎಸ್., ಬೀಳಗಿ