ಕನ್ನಡಪ್ರಭ ವಾರ್ತೆ ಸಿರಿಗೆರೆ

ಅಪೂರ್ಣಗೊಂಡ ೧೫ ಕಿ.ಮೀ. ದೂರದ ಬೊಮ್ಮೇನಹಳ್ಳಿ– ಸಿರಿಗೆರೆ ಸಿಸಿ ರಸ್ತೆಯನ್ನು ಪೂರ್ಣಗೊಳಿಸಲು ಅಗತ್ಯವಾದ ೧೦ ಕೋಟಿ ರು. ಅನುದಾನವನ್ನು ನೀಡಲಾಗುವುದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ೩ ಕೋಟಿ ರು. ವೆಚ್ಚದ ಸಿಸಿ ರಸ್ತೆ, ಚರಂಡಿ, ಸೋಲಾರ್‌ ದೀಪಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನೂರು ಕಿ.ಮೀ. ದೂರದಲ್ಲಿರುವ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದೆ. ನೀರು ಶುದ್ದೀಕರಣಕ್ಕೆ ಬೇಕಾದ ಯಂತ್ರಕ್ಕೆ ೬೦ ಕೋಟಿ ರು. ನಿಗದಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಸರ್ಕಾರ ಯಾವುದಿದ್ದರೇನು? ಇಲಾಖೆಗಳಲ್ಲಿ ಲಭ್ಯ ಇರುವ ಅನುದಾನಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಯ ಕೆಲಸ ಮಾಡುತ್ತಿದ್ದೇನೆ. ಓಟು ಹಾಕಿಸಿಕೊಂಡು ಗೆದ್ದ ಜನಪ್ರತಿನಿಧಿಗೆ ಇರಬೇಕಾದ ಬದ್ಧತೆ ನನ್ನಲ್ಲಿ ಇರುವುದರಿಂದ ಜನರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕೆಲಸಕ್ಕೆ ಮುಂದಾಗಿದ್ದೇನೆ. ಗ್ರಾಮಗಳಲ್ಲಿ ಶಾಲೆ, ದೇವಸ್ಥಾನ, ಸಿ.ಸಿ.ರಸ್ತೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದೇನೆ. ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ತಿಳಿದು, 130 ಕೋಟಿ ರು. ಖರ್ಚು ಮಾಡಿ ವಾಣಿ ವಿಲಾಸದಿಂದ ನೀರು ತರುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಮೆಷಿನರಿ, ಪೈಪ್‍ಲೈನ್ ಅಳವಡಿಸಲಾಗಿದೆ ಎಂದರು.


ಕ್ಷೇತ್ರದಲ್ಲಿ ರೈತರ ಹಿತವನ್ನು ಕಾಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ, ಚೆಕ್‌ ಡ್ಯಾಂ ನಿರ್ಮಾಣದ ಕೆಲಸ, ರೈತರಿಗೆ ಅಗತ್ಯವಿರುವ ವಿದ್ಯುತ್‌ ಸರಬರಾಜು ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರು.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಲಾಗುತ್ತಿದ್ದು, ಮುಕ್ಕಾಲು ಭಾಗ ಕೆಲಸ ಮುಗಿದಿದೆ. ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್‌ ಸಮಸ್ಯೆಯೇ ನಿಮಗೆ ಇರುವುದಿಲ್ಲ ಎಂದರು.

ಸಿರಿಗೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಬಿ.ಮೋಹನ್‌, ಗ್ರಾಮದ ಮಾಲತೇಶ್‌, ಗೌಡ್ರ ಮಹದೇವಪ್ಪ, ಮುಶ್ರಫ್‌, ಷಣ್ಮುಖಪ್ಪ, ನಾಗರಾಜ್‌, ಸಿರಿಗೆರೆ ಪಂಚಾಕ್ಷರಿ, ಮಂಜಣ್ಣ, ರಾಜಣ್ಣ, ಪಿಡಿಒ ಬಸವರಾಜ್ ಮುಂತಾದವರು ಭಾಗವಹಿಸಿದ್ದರು.

ಚಂದ್ರಪ್ಪನವರು ಮುಂದೆ ಸಚಿವರಾಗಬೇಕು!

ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿದ್ದ ನಾನು ಶಾಸಕ ಚಂದ್ರಪ್ಪನವರ ಕೆಲಸ ನೋಡಿ ಬಿಜೆಪಿಗೆ ಬಂದಿದ್ದೇನೆ. ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಅವರು ಸಚಿವರಾಗಬೇಕು. ಆಗ ಈ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಬೇಕು ಎಂದು ಹಳವುದರದ ತಿಪ್ಪೇಸ್ವಾಮಿ ತಿಳಿಸಿದರು.

ಸಿರಿಗೆರೆ ಗ್ರಾಪಂಗೆ ಸೇರಿಸಲು ಮನವಿ

ಮುಂಬರುವ ಚುನಾವಣಾ ಸಂದರ್ಭದಲ್ಲಿ ಚಿಕ್ಕೇನಹಳ್ಳಿ, ಕೋಣನೂರು, ಬೊಮ್ಮವ್ವನಾಗತಿಹಳ್ಳಿ ಗ್ರಾಮಗಳನ್ನು ಸಿರಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಂ.ಚಂದ್ರಪ್ಪ ಅವರಲ್ಲಿ ಬೇಡಿಕೆ ಇಟ್ಟರು.

ಈಗ ಆಲಗಟ್ಟ ವ್ಯಾಪ್ತಿಯಲ್ಲಿ ನಮ್ಮ ಹಳ್ಳಿಗಳನ್ನು ಸೇರಿಸಲಾಗಿದೆ. ಜನರ ಕೆಲಸ ಕಾರ್ಯಗಳಿಗೆ ಸೂಕ್ತವಾದ ಊರು ಸಿರಿಗೆರೆ. ಅಲ್ಲಿಗೆ ಹೋಗಿ ಬರಲು ವಾಹನ ವ್ಯವಸ್ಥೆಗಳು ಇವೆ. ಆಲಗಟ್ಟಕ್ಕೆ ಹೋಗಿ ಬರಲು ಬಸ್‌ ಸೌಕರ್ಯ ಇಲ್ಲ. ಸರಿಯಾದ ರಸ್ತೆಗಳೂ ಇಲ್ಲ. ಜನರ ಅನುಕೂಲತೆಗಳನ್ನು ಗಮನಿಸಿ ಚಿಕ್ಕೇನಹಳ್ಳಿ, ಕೋಣನೂರು ಮತ್ತು ಬೊಮ್ಮವ್ವನಾಗತಿಹಳ್ಳಿ ಗ್ರಾಮಗಳನ್ನು ಸಿರಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಸಬೇಕು ಎಂದರು. ಪ್ರತಿಕ್ರಿಯಿಸಿದ ಶಾಸಕ ಎಂ.ಚಂದ್ರಪ್ಪ ಈ ವಿಚಾರವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದರು.