ಭ್ರೂಣ ಪತ್ತೆ ನಿಷೇಧ: ಕಾಯ್ದೆ ಕಟ್ಟುನಿಟ್ಟಿನ ಜಾರಿಯಾಗಲಿ

KannadaprabhaNewsNetwork | Published : Mar 14, 2025 12:34 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಎಲ್ಲ ಖಾಸಗಿ ನೋಂದಾಯಿತ ಆರೋಗ್ಯ ಸಂಸ್ಥೆಗಳು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು ಸಂಸ್ಥೆಯ ಆವರಣದಲ್ಲಿ ಕೆಪಿಎಂಇ ನಿಯಮದನ್ವಯ ನಿಗದಿತ ನಮೂನೆಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಎಲ್ಲ ಖಾಸಗಿ ನೋಂದಾಯಿತ ಆರೋಗ್ಯ ಸಂಸ್ಥೆಗಳು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು ಸಂಸ್ಥೆಯ ಆವರಣದಲ್ಲಿ ಕೆಪಿಎಂಇ ನಿಯಮದನ್ವಯ ನಿಗದಿತ ನಮೂನೆಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಪಿಎಂಇ ಹಾಗೂ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಹಾಗೂ ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು ೮೧೭ ಕೆ.ಪಿ.ಎಂ.ಇ ಅಡಿ ನೋಂದಣಿಯಾದ ಆರೋಗ್ಯ ಸಂಸ್ಥೆಗಳಿದ್ದು, ಅದರಲ್ಲಿ ೩೮೨ ಆರೋಗ್ಯ ಸಂಸ್ಥೆಗಳು ಮಾತ್ರ ನಿಯಮಾನುಸಾರ ಬಣ್ಣದ ಫಲಕಗಳನ್ನು ಅಳವಡಿಸಿಕೊಂಡಿವೆ. ನೋಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕೆಪಿಎಂಇ ನಿಯಮ ೫ರ ನೋಂದಣಿಯನ್ವಯ ವೈದ್ಯಕೀಯ ಚಿಕಿತ್ಸಾ ಪದ್ಧತಿ ವಿಧಾನ, ಸಂಸ್ಥೆಯ ಹೆಸರು, ನೋಂದಣಿ ಪ್ರಮಾಣ, ಸಂಸ್ಥೆಯ ಹೆಸರು, ಮಾಲೀಕರು, ವ್ಯವಸ್ಥಾಪಕರ ಹೆಸರು, ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸಬೇಕು.

ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ಆಯುರ್ವೇದ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಹಯೋಗ ಪಡೆದು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ವರದಿ ಕ್ರೋಢಿಕರಿಸಿ ಮೂರು ದಿನಗಳೊಳಗಾಗಿ ವರದಿ ಸಲ್ಲಿಸಲು ತಿಳಿಸಿದರು.

ಪಿಸಿಪಿಎನ್ ಡಿಟಿ: ಭೂಣ ಲಿಂಗ ಪತ್ತೆ ನಿಷೇಧ ಕಾಯಿದೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಅಂತ್ಯಂತ ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಮಟ್ಟದ ಸಮಿತಿ ಕಳೆದ ೨೦೨೪ರ ಅಕ್ಟೋಬರ್‌ನಲ್ಲಿ ೪೫, ನವೆಂಬರ್‌ನಲ್ಲಿ ೪೬ ಹಾಗೂ ಡಿಸೆಂಬರ್‌ನಲ್ಲಿ ೪೮ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜನವರಿ-೨೦೨೫ರ ಮಾಹೆಯಲ್ಲಿ ೫೦ ಹಾಗೂ ಫೆಬ್ರುವರಿಯಲ್ಲಿ ೪೫ ಸೆಂಟರ್‌ಗಳ ತಪಾಸಣೆ ನಡೆಸಲಾಗಿದ್ದು, ಪಿಸಿಎನ್‌ಪಿಎನ್‌ಡಿಟಿ ಕಾಯ್ದೆಯಡಿಯಲ್ಲಿ ೪ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ ಗುಣಾರಿ, ಐಎಂಎ ಅಧ್ಯಕ್ಷರಾದ ದಯಾನಂದ ಬಿರಾದಾರ, ಸದಸ್ಯರಾದ ಡಾ.ರಾಜಶ್ರೀ ಯಲಿವಾಳ, ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆಯುಷ ಅಧಿಕಾರಿಗಳು ಪಿ.ಸಿ.ಪಿ.ಎನ್.ಡಿ.ಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ಆರ್ ಬಿದರಿ, ಸದಸ್ಯ ಡಾ.ಎಸ್.ಎಸ್ ಕಲ್ಯಾಣಶೆಟ್ಟಿ, ಡಾ.ಜೆ.ಎಸ್ ಕಡಕೋಳ, ಡಾ.ಎಸ್.ಜಿ.ರೂಡಗಿ, ಎಸ್.ಎ.ಶಿವಗೊಂಡ, ವಿಜಯಾ ಬಾಳಿ, ಡಾ.ರಾಜಶೇಖರ ಮುಚ್ಚಂಡಿ, ಡಾ.ಪಿ.ಬಿ.ದೇವಮಾನೆ, ಸುಮಾ ಚೌಧರಿ ಮುಂತಾದವರು ಇದ್ದರು.-----------

ಕೋಟ್‌.......

ಕೆಲವು ನೋಂದಾಯಿತ ಖಾಸಗಿ ಸಂಸ್ಥೆಗಳು ನಾಮಫಲಕಗಳನ್ನು ಅಳವಡಿಸಿಕೊಂಡಿಲ್ಲ. ಇಂತಹ ಆರೋಗ್ಯ ಸಂಸ್ಥೆಗಳಿಗೆ ನೋಟಿಸ್ ನೀಡಿ, ಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು. ನಿಯಮಾನುಸಾರ ಫಲಕಗಳನ್ನು ಅಳವಡಿಸದಿದ್ದಲ್ಲಿ ಖಾಸಗಿ ಕ್ಲಿನಿಕ್‌ಗಳಿಗೆ ₹10 ಸಾವಿರ ದಂಡ ಹಾಗೂ ಆಸ್ಪತ್ರೆ, ಆರೋಗ್ಯ ಸಂಸ್ಥಗಳಿಗೆ ₹ 50 ಸಾವಿರ ದಂಡ ವಿಧಿಸಲು ಕ್ರಮಕೈಗೊಳ್ಳಬೇಕು. ಈ ಕುರಿತು ಸಮಗ್ರ ವರದಿ ಸಲ್ಲಿಸಬೇಕು.

- ಟಿ.ಭೂಬಾಲನ್‌, ಜಿಲ್ಲಾಧಿಕಾರಿ

Share this article