ಕನ್ನಡಪ್ರಭ ವಾರ್ತೆ, ಬೀದರ್
ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಭಾನುವಾರ ಸಂಜೆ ಹಿಂದು ರಾಷ್ಟೀಯ ಜಾಗರಣ ಸಮಿತಿ ವತಿಯಿಂದ ನಡೆಯಬೇಕಿದ್ದ ಬೃಹತ್ ಹಿಂದೂ ಜಾಗೃತಿ ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಜಿಲ್ಲೆಯಾದ್ಯಂತ ಹಿಂದುಗಳಿಂದ ಆಕ್ರೋಶಕ್ಕೆ ಗುರಿಯಾಗಲಿದ್ದು ಜಿಲ್ಲಾಡಳಿತದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾವೆ ಹುಡಲಾಗುವುದು ಎಂದು ಸಮಿತಿಯ ಮುಖಂಡ ಈಶ್ವರಸಿಂಗ ಠಾಕೂರ್ ಎಚ್ಚರಿಸಿದರು.ಅವರು ಈ ಹಿನ್ನೆಲೆಯಲ್ಲಿ ದಿಢೀರನೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೈದ್ರಾಬಾದ್‌ನ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಧವಿ ಲತಾ, ಗುಜರಾತಿನ ಖ್ಯಾತ ಭಾಷಣಕಾರ್ತಿ ಕಾಜಲ್ ಹಿಂದೂಸ್ತಾನಿ ಹಾಗೂ ಶ್ರೀರಾಮ ಸೇನೆಯ ರಾಷ್ಟೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರುಗಳಿಗೆ ಬೀದರ್ ಜಿಲ್ಲೆಗೆ ನಿಷೇಧ ನಿಷೇಧ ಹೇರಿ ಜಿಲ್ಲಾಡಳಿತ ಶನಿವಾರ ರಾತ್ರಿ ಆದೇಶ ಹೊರಡಿಸಿ ರುವುದು ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಕಲಂ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಧವಿ ಲತಾ ಅವರು ಲೋಕಸಭೆ ಚುನಾವಣೆಯಲ್ಲಿ ಬಿಲ್ಲು, ಬಾಣ ಪ್ರದರ್ಶಿಸಿದ್ದಾರೆ, ಕಾಜಲ್ ಹಿಂದೂಸ್ತಾನಿ ಅವರು ಗುಜರಾತಿನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ, ಪ್ರಮೋದ್ ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪ್ರಚೋಧನಕಾರಿ ಭಾಷಣ ಮಾಡುತ್ತಾರೆ ಎಂಬ ನೆಪವೊಡ್ಡಿ ಈ ಮೂವರನ್ನು ಬೀದರ್‌ಗೆ ಬರದಂತೆ ತಡೆಯಲು ಜಿಲ್ಲಾಡಳಿತ ನಿಷೇಧ ಹೇರಿರುವುದನ್ನು ಉಗ್ರವಾಗಿ ಖಂಡಿಸುವುದಾಗಿ ಠಾಕೂರ್ ತಿಳಿಸಿದರು.ಇತ್ತೀಚೆಗೆ ಮಾಧವಿ ಲತಾ ಅವರು, ಕಲಬುರಗಿಯ ಗಣೇಶ ಉತ್ಸವದಲ್ಲಿ ಬಂದು ಭಾಷಣ ಮಾಡಿದ್ದರು, ಕಾಜಲ್ ಹಿಂದೂಸ್ತಾನಿ ಅವರು ಒಂದು ತಿಂಗಳ ಹಿಂದೆ ಭಾಲ್ಕಿಯಲ್ಲಿ ಮಾತನಾಡಿದ್ದರು, ಆಗ ಏಕೆ ನಿಷೇಧ ಹೇರಲಿಲ್ಲ, ಪ್ರಮೋದ್ ಮುತಾಲಿಕ್ ಅವರು ಕಳೆದ ಹತ್ತು ವರ್ಷಗಳಿಂದ ಬೀದರ್‌ಗೆ ಬರುತ್ತಿಲ್ಲ ಅವರು ಯಾವ ತಪ್ಪು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿರುವ ಠಾಕೂರ್ ಅವರು, ಈ ಬೃಹತ್ ಸಮಾವೇಶಕ್ಕಾಗಿ ಲಕ್ಷಾವಧಿ ಹಣ ಸಂಗ್ರಹಿಸಿ ಪೆಂಡಾಲ್, ವೇದಿಕೆ ಸೇರಿದಂತೆ ಧ್ವನಿವರ್ಧಕ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದ್ದು, ಈ ಅಪಾರ ಹಣದ ನಷ್ಟವನ್ನು ಭರಿಸುವವರು ಯಾರು ಆ ಮೂವರನ್ನು ಬಾರದಂತೆ ಜಿಲ್ಲೆಗೆ ಜಿಲ್ಲಾಡಳಿತ ತಡೆಯಬಹುದಾಗಿತ್ತು. ಆದರೆ, ಇಡೀ ಕಾರ್ಯಕ್ರಮ ಸ್ಥಳದಲ್ಲಿ ಕಲಂ 144 ನಿಷೇಧಾಜ್ಞೆ ಹೇರಿ ಭಾರತದ ಭೂಮಿಯಲ್ಲಿನ ಹಿಂದೂಗಳನ್ನು ದಮನ ಮಾಡಲು ಹೊರಟಿರುವ ಜಿಲ್ಲಾಡಳಿತ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.ಕಾರ್ಯಕ್ರಮಕ್ಕೆ ಆದ ಅಪಾರ ನಷ್ಟವನ್ನು ಜಿಲ್ಲಾಡಳಿತದಿಂದ ವಸೂಲಿ ಮಾಡಿ ಕೊಡಲು ನ್ಯಾಯಾಲಯಕ್ಕೆ ಪ್ರತ್ಯೇಕ ಖಟ್ಲೆ ಹಾಕಲಾಗುವುದು ಎಂದು ಎಚ್ಚರಿಸಿದರು. ಇತ್ತೀಚೆಗೆ ಇದೇ ಮೈದಾನದಲ್ಲಿ ಅನ್ಯ ಕೋಮಿನ ಮೂರು ದಿವಸದ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಜಿಲ್ಲಾಡಿಳಿತ ನಿದ್ರೆಗೆ ಜಾರಿತ್ತೆ? ಎಂದು ಪ್ರಶ್ನಿಸಿದರು. ಈ ತಿಂಗಳ 11ರಂದು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಮೌಲ್ವಿಗಳ ಸಮಾವೇಶ ನಡೆಯಲು ಈ ಸರ್ಕಾರ ಅನುಮತಿ ನೀಡಿದೆ. ಆದರೆ, ಇಡೀ ವಿಶ್ವದಲ್ಲಿಯೇ ಹಿಂದೂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ದೇಶದಲ್ಲಿ ಹಿಂದುಗಳ ಮೇಲೆ ಅನ್ಯಾಯ ವೆಸಗಲಾಗುತ್ತದೆ ಎಂದರೆ ನಾವು ಕಾರ್ಯಕ್ರಮ ಎಲ್ಲಿ ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇನ್ನು ಮುಂದೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಕಾರ್ಯಕ್ರಮದ ನಿಷೇಧ ಕುರಿತು ಬೆಳಗಾವಿಯ ಅಧಿವೇಶನದಲ್ಲೂ ಸಹ ನಮ್ಮ ಬಿಜೆಪಿ ಶಾಸಕರ ಮೂಲಕ ದೊಡ್ಡ ರೀತಿಯಲ್ಲಿ ಧ್ವನಿ ಎತ್ತಲಾಗುವುದು. ಇನ್ನು ಮುಂದೆ ಉಚ್ಛ ನ್ಯಾಯಾಲಯದಲ್ಲಿ ಕಾರ್ಯಕ್ರಮದ ಆಯೋಜನೆಗೆ ಆದೇಶ ಪಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಹಿಂದುಗಳನ್ನು ಸೇರಿಸಿ ಇದಕ್ಕಿಂತಲೂ ವಿಶಾಲ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಸಿದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಹಾಗೂ ನಿವೃತ್ತ ತಹಶೀಲ್ದಾರ ಶಂಕ್ರೆಪ್ಪ ಪಾಟೀಲ್, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ವಿಶ್ವ ಹಿಂದು ಪರಿಷತ್‌ನ ವಿಭಾಗೀಯ ಪ್ರಮುಖರಾದ ರಾಮಕೃಷ್ಣನ್ ಸಾಳೆ, ಬಸವರಾಜ ಸ್ವಾಮಿ ಹಾಗೂ ಇತರರು ಇದ್ದರು.