(ಮಿಡ್ಲ್ ಡಿಸಿ)
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಶಾಲೆಗಳಲ್ಲಿ ಇನ್ನು ಮುಂದೆ ಶೈಕ್ಷಣಿಕೇತರ ಚಟುವಟಿಕೆ ನಡೆಸುವಂತಿಲ್ಲ. ಅಂದರೆ ಈ ಹಿಂದೆ ಸಾರ್ವಜನಿಕವಾಗಿ ನಡೆಯುತ್ತಿದ್ದ ಕೃಷ್ಣಾಷ್ಟಮಿ, ಗಣೇಶೋತ್ಸವ ಮುಂತಾದ ಹಬ್ಬಗಳ ಆಚರಣೆಗೆ ಬರೆ ಹಾಕಲಾಗಿದೆ. ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು(ಡಿಡಿಪಿಐ) ಈ ಕುರಿತು ಹೊರಡಿಸಿದ ಜ್ಞಾಪನಾ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ. ಈ ರೀತಿ ಸುತ್ತೋಲೆ ಹೊರಡಿಸಿರುವುದು ಸರ್ಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ಷೇಪಿಸಿದ್ದಾರೆ.
ಜು.16ರಂದು ಡಿಡಿಪಿಐ ಈ ಜ್ಞಾಪನಾ ಪತ್ರ ಹೊರಡಿಸಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಹಬ್ಬಗಳ ಆಚರಣೆ ಕುರಿತು ನಾಗರಿಕ ಸಮಿತಿ ಮುಖಂಡರು ಶಾಲೆಗಳಿಗೆ ಭೇಟಿ ನೀಡಿ ಅನುಮತಿ ಕೇಳಿದಾಗ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿರುವುದು ಬೆಳಕಿಗೆ ಬಂದಿದೆ.ಜ್ಞಾಪನಾ ಪತ್ರದಲ್ಲಿ ಏನಿದೆ?: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನೂ ನೀಡಬಾರದು. ಅಲ್ಲದೆ ಅನುಮತಿಗಾಗಿ ಡಿಡಿಪಿಐ ಕಚೇರಿಗೂ ಪ್ರಸ್ತಾವನೆ ಸಲ್ಲಿಸಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಈ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆ ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
ಸಂಘಟನೆಗಳ ವಿರೋಧ ಏಕೆ?: ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದ ಬೆನ್ನಲ್ಲೇ ಕೃಷ್ಣಾಷ್ಟಮಿ, ಗಣೇಶೋತ್ಸವಗಳಿಗೆ ಅನುಮತಿ ನೀಡಲು ಶಾಲಾ ಆಡಳಿತ ಮಂಡಳಿಗಳು ನಿರಾಕರಿಸಿವೆ. ಸ್ವಯಂ ಆಗಿ ಅನುದಾನ ರಹಿತ ಶಾಲೆಗಳಲ್ಲೂ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲು ಈ ಬಾರಿ ಕಷ್ಟಸಾಧ್ಯವಾಗಲಿದೆ. ನಾಗರಿಕ ಸಂಘಟನೆಗಳು ಮನವಿ ಸಲ್ಲಿಸಿದರೂ ಶಾಲಾ ಹಂತದಲ್ಲೇ ಮುಖ್ಯಗುರುಗಳು ನಿರಾಕರಿಸುತ್ತಿದ್ದು, ಈ ಜ್ಞಾಪನಾ ಪತ್ರವನ್ನು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಹಬ್ಬಗಳ ಸಾರ್ವಜನಿಕ ಆಚರಣೆ ಎಲ್ಲಿ ಮತ್ತು ಹೇಗೆ ನಡೆಸುವುದು ಎಂಬ ಚಿಂತೆ ಸಂಘಟನೆಗಳನ್ನು ಆವರಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಬಗ್ಗೆ ಮಾತನಾಡುವ ಸರ್ಕಾರ ಹಿಜಾಬ್ ವಿಚಾರದಲ್ಲಿ ಯಾಕೆ ಮೌನ ವಹಿಸಿದೆ? ಅದನ್ನು ಯಾಕೆ ರದ್ದುಪಡಿಸುತ್ತಿಲ್ಲ? ಹಿಜಾಬ್ ಮೂಲಕ ಸರ್ಕಾರವೇ ಯಾವಾಗಲೂ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುತ್ತಿದ್ದು, ಹಿಂದು ಹಬ್ಬಗಳ ಆಚರಣೆ ವಿಚಾರದಲ್ಲಿ ಮಾತ್ರ ತಾರತಮ್ಯ ಎಸಗಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಲೆಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆ ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಗೆ ಎಲ್ಲ ಶಾಲೆಗಳೂ ಬದ್ಧರಾಗಿರಬೇಕಾದ್ದು ಕರ್ತವ್ಯ.