- ಹರಿಹರ ತಾಲೂಕು ಕಚೇರಿ ಮೂಲಕ ಸರ್ಕಾರಕ್ಕೆ ದಲಿತ ಸಂಘರ್ಷ ಸಮಿತಿ ಮನವಿ
ಕನ್ನಡಪ್ರಭ ವಾರ್ತೆ ಹರಿಹರ ಅಪಾಯದ ಅಂಚಿನಲ್ಲಿರುವ ತುಂಗಭದ್ರಾ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಮಾಡಿದರು.
ನಗರದ ಕ.ದ.ಸಂ.ಸ. ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಅಶೋಕ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ತುಂಗಭದ್ರಾ ನದಿಯು ಮಧ್ಯ, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜೀವನದಿಯಾಗಿದೆ. 2 ದಶಕಗಳಿಂದ ಅಕ್ರಮ-ಸಕ್ರಮ ವಿಧಾನದಲ್ಲಿ ಅತಿಯಾದ ಮರಳುಗಾರಿಕೆ ನಡೆಸಲಾಗಿದೆ. ನದಿದಡದ ನದಿ ಖರಾಬು ಪ್ರದೇಶದ ಜಮೀನಿನಲ್ಲಿಯೂ ಅತಿಯಾದ ಮಣ್ಣು ಗಣಿಗಾರಿಕೆ ನಡೆದಿದೆ. ಇದರ ಪರಿಣಾಮ ನದಿಯ ಅಸ್ತಿತ್ವಕ್ಕೆ ತೀವ್ರ ಅಪಾಯ ಎದುರಾಗಿದೆ. ನದಿ ಖರಾಬ್ ಜಮೀನನ್ನು ರಕ್ಷಿಸಬೇಕು ಎಂದರು.
ಹೀಗೆ ಅಕ್ರಮ ಮತ್ತು ಸಕ್ರಮ ರೂಪದಲ್ಲಿ ಅತಿಯಾದ ಮರಳುಗಾರಿಕೆಯು ನದಿ ದಡ ಹಾಗೂ ನದಿ ಒಡಲಿನ ರಚನೆಯನ್ನೇ ಹದಗೆಡಸಿದೆ. ನದಿ ಪಾತ್ರದಲ್ಲಿ ಮರಳಿಗಾಗಿ 10 ರಿಂದ 20 ಅಡಿ ಆಳದವರೆಗೆ ಗುಂಡಿಗಳನ್ನು ತೋಡಿದ್ದಾರೆ. ನದಿಯನ್ನು ಆಶ್ರಯಿಸಿದ ಜಲಚರ, ಪ್ರಾಣಿ, ಪಕ್ಷಿ, ಜನಗಳ ಅಸ್ತಿತ್ವಕ್ಕೆ ತೀವ್ರ ಧಕ್ಕೆ ಒದಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಣ್ಣು ಮಾಫಿಯಾಕ್ಕೆ ನದಿದಡದ ಹಲವು ರುದ್ರಭೂಮಿ, ಖಬರಸ್ತಾನಗಳು ಅಸ್ತಿತ್ವ ಕಳೆದುಕೊಂಡಿವೆ. ನದಿಗೆ ತಲುಪಲು ಇದ್ದ ಬಂಡಿ ರಸ್ತೆ, ಕಾಲುದಾರಿಗಳು ಮಾಯವಾಗಿವೆ. ನದಿ ಉಳಿಸುವ ಸಲುವಾಗಿ ಈ ನದಿಯ ಬ್ಲಾಕ್‍ಗಳಲ್ಲಿ 10 ವರ್ಷಗಳ ಅವಧಿಗೆ ಮರಳು ಗಣಿಗಾರಿಕೆ ಸ್ಥಗಿತಗೊಳಿಸಬೇಕು. ನದಿ ಖರಾಬ್ ಜಮೀನಿನ ರಕ್ಷಣೆಗಾಗಿ ಸೂಕ್ತ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
- - -
ಹರಿಹರದ ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಕ.ದ.ಸಂ.ಸ. ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಅಶೋಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.