ನೊಂದಣಿಯಿಲ್ಲದ ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ

KannadaprabhaNewsNetwork |  
Published : Nov 11, 2025, 01:15 AM IST

ಸಾರಾಂಶ

ಸಂವಿಧಾನ ಬದ್ಧ ನೊಂದಾಯಿತ ಸಂಸ್ಥೆಯಲ್ಲದ ಆರ್.ಎಸ್.ಎಸ್‌ನ್ನು ದೇಶದಲ್ಲಿ ಬ್ಯಾನ್ ಮಾಡಬೇಕು

ಕನ್ನಡಪ್ರಭ ವಾರ್ತೆ, ತುಮಕೂರು

ಸಂವಿಧಾನ ಬದ್ಧ ನೊಂದಾಯಿತ ಸಂಸ್ಥೆಯಲ್ಲದ ಆರ್.ಎಸ್.ಎಸ್‌ನ್ನು ದೇಶದಲ್ಲಿ ಬ್ಯಾನ್ ಮಾಡಬೇಕು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಮಾಡಿದ, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸೆದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತಾರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು, ಬ್ರಾಹ್ಮಣವಾದವನ್ನು ಮುಂದಿಟ್ಟು, ಸಂವಿಧಾನದ ಬದಲಿಗೆ ಮನುಸ್ಮೃತಿಯನ್ನು ತಮ್ಮ ಆಡಳಿತ ಗ್ರಂಥವಾಗಿ ಮಾರ್ಪಡಿಸುವ ಗುರಿ ಹೊಂದಿರುವ ಆರ್.ಎಸ್.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ಎ.ಡಿ.ಸಿ. ಡಾ..ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಾತ್ಯತೀತ ಯುವ ವೇದಿಕೆ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ, 1950 ರ ದಶಕದಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಯಾವುದೇ ಕಾರಣಕ್ಕೂ ಆರ್.ಎಸ್.ಎಸ್. ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅಷ್ಟಲ್ಲದೇ ಆರ್.ಎಸ್.ಎಸ್. ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು ಎಂದರು.

ಹೋರಾಟಗಾರ ಕುಂದೂರು ಮುರುಳಿ ಮಾತನಾಡಿ, ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಲು ಬಯಸಿದ್ದು ಹಿಂದೂ ಕೋಡ್ ಬಿಲ್ ಜಾರಿಯಾಗಲು ಅಂಬೇಡ್ಕರ್ ಹೋರಾಡುತ್ತಿದ್ದರೆ. ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್.ಎಸ್.ಎಸ್. ವಿಕೃತಿ ಮೆರೆದಿತ್ತು. ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಾಧೀಶರಾದ ಗವಾಯಿರವರ ಮೇಲೆ ಶೂ ಎಸೆಯಲಾಗಿತ್ತು. ಆ ಕೃತ್ಯ ಮಾಡಿದ ವಕೀಲ ರಾಕೇಶ್ ಕಿಶೋರ್ ಸನಾತನ ಧರ್ಮ ಉಳಿಸಲು ಶೂ ಏಸೆದೆ ಎಂದು ಎದೆ ಉಬ್ಬಿಸಿ ಹೇಳುತ್ತಾರೆ. ಭಾರತ ದೇಶದಲ್ಲಿ ವಕೀಲನಾಗಿದ್ದು, ಭಾರತ ಸಂವಿಧಾನವನ್ನು ಕಾಪಾಡುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಭಾರತ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರ್.ಎಸ್.ಎಸ್. ಮತ್ತು ಬಿಜೆಪಿ ರವರ ಆಟ ಅತಿರೇಕವಾಗಿದೆ ಇಂತಹ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸದೇ ಇದ್ದರೆ ಭಾರತದ ಸಂವಿಧಾನಕ್ಕೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಆರ್.ಎಸ್.ಎಸ್. 100 ವರ್ಷ ಪೂರೈಸಿದೆ ಎಂದು ಕಾನೂನು ಬಾಹೀರವಾಗಿ ತನಗೆ ಬೇಕಾದ ಹಾಗೇ ಸಂಭ್ರಮಾಚರಣೆ ತೊಡಗಿದೆ. ಮುಂಗಡವಾಗಿ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುವುದನ್ನು ಸಚಿವರಾದ ಪ್ರಿಯಾಂಕ ಖರ್ಗೆ ರವರು ಪ್ರಶ್ನಿಸಿದ್ದರು. ಇದನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಶಬ್ದ ಬಳಿಸಿ ನಿಂದಸಿದ್ದಲ್ಲದೇ ಅವರ ಪೋನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದರು. ಇಂತಹ ಆರ್.ಎಸ್.ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದರು. ಈ ವೇಳೆ ಮುಖಂಡರಾದ ಕುಪ್ಪೂರ ಶ್ರೀಧರ್, ಜಿಲ್ಲಾ ಸಂಚಾಲಕರಾದ ಬಿ.ಆರ್.ಕೃಷ್ಣಸ್ವಾಮಿ, ಕೆಸ್ತೂರು ನರಸಿಂಹಮೂರ್ತಿ, ಚಂದ್ರಶೇಖರ್ ಗಡಬನಹಳ್ಳಿ, ದಯಾನಂದ್, ಮಂಜು ಗೊಲ್ಲಹಳ್ಳಿ,ಉಗ್ರನರಸಿಂಹಯ್ಯ, ತ್ರಿನೇಶ್, ರಾಯಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV

Recommended Stories

ಸತತ 9 ಗಂಟೆ ಕೆಡಿಪಿ ಸಭೆ ನಡೆಸಿದ ಸಿಎಂ!
ಇಂದು ಮಾಲೂರು ವಿಧಾನಸಭಾ ಕ್ಷೇತ್ರ ಮತ ಮರುಎಣಿಕೆ